ಮಹಾಕುಂಭ ನಗರ(ಉತ್ತರ ಪ್ರದೇಶ): ಸನಾತನ ಧರ್ಮವನ್ನು ನಿಮ್ಮ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಸಂತರು, ವಿವಿಧ ಮಠದ ಪೀಠಾಧಿಪತಿಗಳು ರಾಜಕಾರಣಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು (ಸೋಮವಾರ) ವಸಂತ ಪಂಚಮಿ ಪ್ರಯುಕ್ತ ಮೂರನೇ ಅಮೃತ ಸ್ನಾನದಲ್ಲಿ ಸಂತರು, ಸನ್ಯಾಸಿಗಳು, ಸಾಧುಗಳು, ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಕೃತಾರ್ಥರಾದರು.
ಇದೇ ವೇಳೆ, ರಾಜ್ಯ ಸರ್ಕಾರವು ಪಂಚ ನಿರ್ವಾಣಿ ಅಖಾಡದ ಮಹಾಂತ ಸಂತೋಷ್ ದಾಸ್ ಸತ್ತುವಾ ಬಾಬಾ ಮಹಾರಾಜ್ ಅವರು ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
“ರಾಜಕೀಯ ನಾಯಕರು ಸನಾತನ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಮಹಾ ಕುಂಭಮೇಳದ ಬಗ್ಗೆ ವದಂತಿಗಳನ್ನು ಹಬ್ಬಿಸಬಾರದು. ಇದನ್ನೆಲ್ಲಾ ಹಿಂದುಗಳು ಸಹಿಸುವುದಿಲ್ಲ. ನೀವು ಪಾಲಿಸದ ಧರ್ಮವನ್ನು ದುರುಪಯೋಗ ಮಾಡಿಕೊಳ್ಳಬೇಡಿ” ಎಂದು ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.