ನವದೆಹಲಿ, ಆಗಸ್ಟ್ 1: ಮೇಕೆದಾಟು ಸಮಸ್ಯೆ ಬಗೆಹರಿಸಲು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಒಟ್ಟಾಗಿ ಕುಳಿತುಕೊಂಡು ಮಾತುಕತೆ ನಡೆಸಬೇಕು. ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಶಿವಕುಮಾರ್ ದೆಹಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಿಧ ಯೋಜನೆಗಳಿಗೆ ಕೇಂದ್ರದ ಅನುದಾನ ಕೋರಿ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ.
ಸಭೆಯಿಂದ ಹೊರಬಂದ ಬಳಿಕ ಮಾತನಾಡಿದ ಶಿವಕುಮಾರ್, ನಾನು ಮೇಕೆದಾಟು ವಿಷಯವನ್ನು ಪ್ರಸ್ತಾಪಿಸಿದಾಗ, ಅದನ್ನು ನಮ್ಮಲ್ಲಿಯೇ ಬಗೆಹರಿಸಿಕೊಳ್ಳುವಂತೆ ಪ್ರಧಾನಿ ಸೂಚಿಸಿದರು ಎಂದಿದ್ದಾರೆ.
ನಿಗದಿತ ಅವಧಿಗಿಂತ ಜುಲೈನಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಟ್ಟಿರುವ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಗಿದೆ. ಮೇಕೆದಾಟುವಿನಲ್ಲಿ ಜಲಾಶಯವನ್ನು ನಿರ್ಮಿಸಲು ಕರ್ನಾಟಕಕ್ಕೆ ಅವಕಾಶ ನೀಡುವಂತೆ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದೆ. ಮೇಕೆದಾಟು ಜಲಾಶಯ ನಿರ್ಮಿಸಿದ್ದರೆ ಹೆಚ್ಚುವರಿ ನೀರು ಸಂಗ್ರಹವಾಗುತ್ತಿತ್ತು ಎಂಬುದನ್ನೂ ತಿಳಿಸಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.