ಬೆಂಗಳೂರು: ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದ್ದು, ಈ ಯೋಜನೆ ಜಾರಿಗೆ ಸಹಕಾರ ನೀಡಿ ಎಂದು ನಮ್ರತೆಯಿಂದ ಕೇಳಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಮಿಳುನಾಡಿಗೆ ಮನವಿ ಮಾಡಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆ ಕರೆದಿರುವ ಬಗ್ಗೆ ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕಾವೇರಿ ನೀರಿನ ವಿಚಾರದಲ್ಲಿ ನಾವು ಸರ್ವಪಕ್ಷ ಸಭೆ ಮಾಡಿದಂತೆ, ತಮಿಳುನಾಡಿನವರು ಸಹ ಸರ್ವಪಕ್ಷ ಸಭೆ ಮಾಡುತ್ತಿದ್ದಾರೆ. ಅದು ಅವರ ಹಕ್ಕು. ಅವರ ಸಭೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ನಿಮಗೂ ಹೆಚ್ಚು ಅನುಕೂಲ ಆಗುವ ಮೇಕೆದಾಟು ಯೋಜನೆಗೆ ಸಹಕಾರ ನೀಡಲಿ” ಎಂದು ತಿಳಿಸಿದರು.
ರಾಜ್ಯದಲ್ಲಿ ಸೋಮವಾರದಿಂದ ಹೆಚ್ಚು ಮಳೆ ಬೀಳುತ್ತಿದ್ದು, ಕಾವೇರಿ ಕೊಳ್ಳದ ಅಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಹೆಚ್ಚಾಗಿದೆ. ಹಾರಂಗಿಯಿಂದ 20 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಮಳೆಯೇ ನಮಗೆ ಆಧಾರ ಎಂದು ಹೇಳಿದ್ದಾರೆ.