ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರಕಲಿರುವ ಏಳು ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.
11 ಸ್ಥಾನಗಳ ಪೈಕಿ ಏಳು ಕಾಂಗ್ರೆಸ್‌ಗೆ ದೊರಕಲಿದ್ದು, ಬಿಜೆಪಿಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ದೊರಕಲಿವೆ. ಏಳು ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಹಲವು ಮಂದಿ ಹೆಚ್ಚು ಆಕಾಂಕ್ಷಿ ಗಳಿದ್ದು, ಟಿಕೆಟ್ ಗಾಗಿ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಲಾಬಿ ನಡೆಸುತ್ತಿದ್ದವರು ಇದೀಗ ದೆಹಲಿಯತ್ತ ಮುಖ ಮಾಡಿದ್ದಾರೆ.
ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಅಂತಿಮಗೊಳಿಸಿದ್ದು, ಪಟ್ಟಿಗೆ ಹೈಕಮಾಂಡ್ ನಿಂದ ಒಪ್ಪಿಗೆ ಪಡೆಯಲು ದೆಹಲಿಗೆ ಭೇಟಿ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕೆಲವರು ಈಗಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ ಸಚಿವ ಎನ್‌ಎಸ್ ಬೋಸರಾಜು ಅವರ ನಾಮಪತ್ರವನ್ನು ಹೈಕಮಾಂಡ್ ತೆರವುಗೊಳಿಸಿದೆ. ಆದರೆ ಖರ್ಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ತಲಾ ಇಬ್ಬರು ನಾಮನಿರ್ದೇಶಿತರನ್ನು ಆಯ್ಕೆ ಮಾಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.