ಬೆಂಗಳೂರು, ಅಕ್ಟೋಬರ್ 9: ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ಹೇಳಿಕೆಗಳು ಕೇಳಿ ಬಂದರೆ ಹಿಂದೆಲ್ಲ ಅದಕ್ಕೆ ತಿರುಗೇಟು ನೀಡುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಈಗ ವರಸೆ ಬದಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಡಿಕೆ ಸುರೇಶ್ ಮಾತ್ರವಲ್ಲದೆ ಡಿಕೆ ಶಿವಕುಮಾರ್ ಸಹ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಮುಡಾ ಹಗರಣ ಕರ್ನಾಟಕ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಡಿಕೆ ಸಹೋದರ ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಸಿದ್ದರಾಮಯ್ಯಗೆ ಮುಡಾ ಹಗರಣದ ಸಂಕಷ್ಟ ಹೆಚ್ಚಾಗಿರುವ ಬೆನ್ನಲ್ಲೇ ಸಾಲು ಸಾಲು ರಹಸ್ಯ ಸಭೆಗಳು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿವೆ. ಒಂದೆಡೆ ಸಚಿವ ಸತೀಶ್ ಜಾರಕಿಹೊಳಿ ನಿವಾಸ ಎರಡು ದಿನಗಳ ಹಿಂದಷ್ಟೇ ಕೇಂದ್ರಬಿಂದುವಾಗಿ ಗಮನ ಸೆಳೆದಿದ್ದರೆ ಮತ್ತೊಂದೆಡೆ ಮೈಸೂರಿನಲ್ಲಿ ಮಂಗಳವಾರ ರಾತ್ರಿ ಸಚಿವ ಮಹದೇವಪ್ಪ ನಿವಾಸದಲ್ಲಿ ದಲಿತ ನಾಯಕರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಡಿಕೆ ಸಹೋದರರ ಮಾತಿನ ಧಾಟಿಯೇ ಬದಲಾಗಿದೆ. ಹಿಂದೆ, ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಎಂದರೆ ಉರಿದು ಬೀಳುತ್ತಿದ್ದ ಉಭಯ ನಾಯಕರು ಇದೀಗ, ಸಿದ್ದು ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರೇ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದೂ ಹೇಳುತ್ತಿದ್ದಾರೆ.