ಜಿಲ್ಲೆಯ 1622 ಅಂಗನವಾಡಿ ಕೇಂದ್ರಗಳಲ್ಲಿ ಏಕಕಾಲಕ್ಕೆ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನಕ್ಕೆ ಮಕ್ಕಳಿಗೆ ಓ.ಆರ್.ಎಸ್ ನೀರು ಕುಡಿಸುವದರೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಂದ ಚಾಲನೆ
ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ 1,622 ಅಂಗನವಾಡಿ ಕೇಂದ್ರಗಳಲ್ಲಿ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದರ ಜೊತೆಗೆ ಪೌಷ್ಠಿಕ ಆಹಾರ ಅಭಿಯಾನದ ಬಗ್ಗೆಯೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಧಾರವಾಡದ ರಾಜೀವ ಗಾಂಧಿ ನಗರದಲ್ಲಿ ಆತ್ಮಾನಂದ ಸಮುದಾಯ ಭವನದಲ್ಲಿ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜೂನ್ 16 ರಿಂದ ಜುಲೈ 31 ರವರೆಗೆ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನವನ್ನು ಪ್ರಾರಂಭಿಸಿದ್ದು, ಹುಟ್ಟಿದ ಮಗುವಿನಿಂದ ಹಿಡಿದು ಆರು ವರ್ಷದವರೆಗಿನ ಮಕ್ಕಳಿಗೆ ತೀವ್ರತರ ಅತಿಸಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಅಭಿಯಾನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ತೀವ್ರತರ ಅತಿಸಾರದಿಂದ ದೂರ ಹೋಗುವಂತೆ ದೊಡ್ಡ ಮಟ್ಟದಲ್ಲಿ ಜಿಲ್ಲೆಯಾದ್ಯಂತ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಮತ್ತು ತಾಯಂದಿರು ಸಹ ಸಹಕಾರ ನೀಡುತ್ತಿದ್ದಾರೆ. ಪ್ರತಿಯೊಂದು ಭಾಗದಲ್ಲಿ ಇರುವ ಅಂಗನವಾಡಿಗಳಲ್ಲಿ ತಾಯಂದಿರನ್ನು ಕರೆದು, ಅವರಿಗೆ ಪೌಷ್ಠಿಕತೆಯ ಬಗ್ಗೆ ಮತ್ತು ಅಂಗನವಾಡಿಯಲ್ಲಿ ಸರಕಾರದಿಂದ ಏನು ಸವಲತ್ತುಗಳು ಮಕ್ಕಳಿಗೆ, ಬಾಣಂತಿಯರಿಗೆ, ಗರ್ಭಿಣಿಯರಿಗೆ ನೀಡಲಾಗುತ್ತಿದೆ ಎಂಬುದರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದು ತಾಯಂದಿರಿಗೆ ಜಾಗೃತಿ ಕಾರ್ಯಕ್ರಮ ಆಗಿದೆ. ತಾಯಿ ಮಗುವಿನ ಮಧ್ಯ ಅವಿನಾಭಾವದ ಸಂಬಂಧವಿದೆ. ಮಗುವಿಗೆ ಎದೆ ಹಾಲು ಮಹತ್ವದ್ದಾಗಿದೆ. ತಾಯಂದಿರು ಮಗು ಜನಿಸಿದ ಕನಿಷ್ಠ ಆರು ತಿಂಗಳು ಎದೆ ಹಾಲು ಉಣಿಸಬೇಕು. ಎದೆ ಹಾಲಿಗೆ ಪರ್ಯಾಯ ಆಹಾರವಿಲ್ಲ. ಇಂತದಕ್ಕೆ ಸೌಂದರ್ಯ ಪ್ರಜ್ಞೆ, ಆಧುನಿಕ ಜೀವನ ಶೈಲಿ ಅಡ್ಡಬರಬಾರದು ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಯವರಿಗೆ ಹೊಸದಾಗಿ ಮಕ್ಕಳ ಸಮೀಕ್ಷೆ ಮಾಡಲು ಸೂಚನೆಯನ್ನು ನೀಡಲಾಗಿದೆ. ವಿಶೇಷ ಸರ್ವೆ ಮಾಡಿ ಹುಟ್ಟಿದ ಮಗುವಿನಿಂದ ಆರು ವರ್ಷದ ಒಳಗಿನ ಮಕ್ಕಳು ಅಂಗನವಾಡಿ ಬಿಟ್ಟು ಹೋಗಿದ್ದರೆ, ಅವರನ್ನು ಅಂಗನವಾಡಿಯಲ್ಲಿ ಸೇರಿಸುವುದಕ್ಕೆ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಹೊಸ ಸರ್ವೆಯನ್ನು ಮಾಡಿ ಎಂದು ನಿರ್ದೇಶನ ನೀಡಲಾಗಿದೆ. ಅದರಿಂದ ಮಕ್ಕಳು ಸುರಕ್ಷಿತವಾಗಿ ಇರಲು ಸಾಧ್ಯ. ವಲಸೆ ಹೋಗುವವರು, ಕೂಲಿ ಕೆಲಸ ಮಾಡುವವರು, ಎಲ್ಲ ತಾಯಂದಿರು, ಪೋಷಕರು ತಮ್ಮ ಮನೆಗಳ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಸೇರಿಸಿ. ಸರ್ಕಾರವು ಅವರಿಗೆ ಒಳ್ಳೆಯ ಊಟ, ಜ್ಞಾನ ಸಮಗ್ರವಾಗಿ ಅಭಿವೃದ್ಧಿಪಡಿಸುವುದಕ್ಕೆ ಅವಕಾಶವಿರುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಅಂಗನವಾಡಿ ಕಲಿಕೆ ಮುಖ್ಯವಾಗಿದೆ. ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಬೆಳೆಯಬೇಕು. ತೀವ್ರ ಅಪೌಷ್ಠಿಕತೆ ಕಾಡುವ ಮಕ್ಕಳಿಗೆ ವಿಶೇಷ ಕಾಳಜಿ ಮಾಡಲಾಗುತ್ತದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ಅಂಗನವಾಡಿಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗರ್ಭಿಣಿಯರು, ತಾಯಂದಿರು ಪೌಷ್ಠಿಕ ಆಹಾರ ಬಳಸಬೇಕು. ಊಟದಿಂದ ಹೊಟ್ಟೆ ಮಾತ್ರ ಅಲ್ಲ, ಹೃದಯ ತುಂಬಬೇಕು ಎಂದರು. ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಗಮನಹರಿಸಿ. ಅಂಗನವಾಡಿಯಲ್ಲಿದ್ದರೆ ಮಕ್ಕಳು ಸುರಕ್ಷಿತವಾಗಿರುತ್ತವೆ. ಅಂಗನವಾಡಿ, ಪ್ರಾಥಮಿಕ ಶಾಲೆಗಳಲ್ಲಿ, ದುಡಿಮೆಗೆ ಹೋಗುವ ಪಾಲಕರ ಮಕ್ಕಳ ಬಗ್ಗೆ ಮಾಹಿತಿ, ವಿಶೇಷ ಕಾಳಜಿ ವಹಿಸಬೇಕು. ಬಾಲ್ಯ ವಿವಾಹ, ಬಾಲ ಗರ್ಭೀಣಿಯರು ಆಗದಂತೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕು. ಹಾಗೂ ಎಲ್ಲರೂ ಎಚ್ಚರ ವಹಿಸಬೇಕು. ಮಾಹಿತಿ ತಿಳಿದು ಬಂದಲ್ಲಿ ಮಕ್ಕಳ ಸಹಾಯವಾಣಿಗೆ ತಿಳಿಸಿ. ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ಇರಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅಂಗನವಾಡಿ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಮನೆಮನೆಗೆ ಭೇಟಿ ನೀಡಿ ಮಕ್ಕಳ ಮಾಹಿತಿ, ಅವರ ಬೆಳವಣಿಗೆ ಬಗ್ಗೆ ಗಮನಹರಿಸಬೇಕು. ಮಕ್ಕಳಲ್ಲಿ ಅಸಮಾನತೆ ಬೇಡ. ಎಲ್ಲರನ್ನು ಒಂದಾಗಿ ಕಾಣಬೇಕು ಎಂದು ತಿಳಿಸಿದರು
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಸರ್ಕಾರದಿಂದ ಬಂದಿರುವ ಪೋಷಕಾಂಶವುಳ್ಳ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬೇಕು ಎಂದು ಹೇಳಿದರು.
ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗಬೇಕು. ತಾಯಂದಿರು ಮಕ್ಕಳಿಗೆ ಆರು ತಿಂಗಳದವರೆಗೆ ಆದರೂ ಎದೆಹಾಲನ್ನು ಕೊಡಬೇಕು. ಅದರ ಹೊರತಾಗಿ ಜೇನುತುಪ್ಪ, ಹಣ್ಣು ತಿನ್ನಿಸುವುದಾಗಲಿ ಮಾಡಬಾರದು. ಮಕ್ಕಳ ಬೆಳಗವಣಿಗೆಯಲ್ಲಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಬಂದ ಕಿಟ್‍ಗಳನ್ನು ಆಯಾ ಸಮಯಕ್ಕೆ ತಪ್ಪದೇ ಅವರಿಗೆ ತಲುಪಿಸಬೇಕು. ಅಪ್ರಾಪ್ತ ವಯಸ್ಸಿನ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ವಿಚಾರ ಗೊತ್ತಾದ ತಕ್ಷಣ ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗರ್ಭೀಣಿಯರಿಗೆ ಉಡಿ ತುಂಬುವ, ಸೀಮಂತ, ಆರು ತಿಂಗಳ ಮಕ್ಕಳಿಗೆ ಅನ್ನ ಪ್ರಾಶಾನ ಮಾಡಲಾಯಿತು. ಪೋಷಣ ಅಭಿಯಾನದಲ್ಲಿ ಗರ್ಭೀಣಿಯರಿಗೆ, ತಾಯಂದಿರಿಗೆ, ಮತ್ತು ಅಪೌಷ್ಠಿಕ ಮಕ್ಕಳಿಗೆ ನೀಡುವ ವಿವಿಧ ಪೌಷ್ಟಿಕತೆ ಇರುವ ಆಹಾರ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪ್ರೋಬೆಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ, ಜಿಲ್ಲಾ ನಿರೂಪನಾಧಿಕಾರಿ ಡಾ. ಕಮಲಾ ಬೈಲೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್. ಎಂ. ಹೊನಕೇರಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಿ ಹಿಂಡಸಗೇರಿ, ಅಶೋಕ ತುರಾಯಿದಾರ, ಮಹೇಶ ಕುಲಗಪ್ಪನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಸಿಬ್ಬಂದಿಗಳು, ಬಾಣಂತಿಯರು, ಗರ್ಭಿಣಿಯರು, ಸಾರ್ವಜನಿಕರು, ಮಕ್ಕಳು ಉಪಸ್ಥಿತರಿದ್ದರು.


