ಧಾರವಾಡ : ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಪ್ರಮುಖ ಸ್ಥಳಗಳನ್ನು ಭದ್ರತೆ ದೃಷ್ಠಿಯಿಂದ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಬಾಹ್ಯ ದಾಳಿ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಜಿಲ್ಲೆಯ ರಕ್ಷಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ಮೆ|| ಹೆಚ್.ಪಿ.ಸಿ.ಎಲ್., ಎಲ್.ಪಿ.ಜಿ ಕಂಪನಿ ಸಹಯೋಗದಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ “ಆಪರೇಶನ್ ಅಭ್ಯಾಸ್” ಅಣುಕ ಪ್ರದರ್ಶನ ಕಾರ್ಯಕ್ರಮ ನೇತೃತ್ವವಹಿಸಿ, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಮುಖ್ಯ ಸ್ಥಳಗಳಾದ ರೈಲು ನಿಲ್ದಾಣ, ಬಸ್ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪೆಟ್ರೊಲಿಯಂ ದಾಸ್ತಾನು ಸಂಗ್ರಹಾರ (ಡಿಪೊ) ಗಳು ಇವೆ.
ಯಾವುದೇ ಅವಘಡ ಸಂಭವಿಸಿದಾಗ ತುರ್ತು ಚಿಕಿತ್ಸೆಗೆ 7 ಸರಕಾರಿ, 31 ಖಾಸಗಿ ಆಸ್ಪತ್ರೆಗಳಿದ್ದು, ಒಟ್ಟು 2841 ಬೆಡ್ಗಳ ಸೌಲಭ್ಯವಿದೆ. 1740 ಆಕ್ಸಿಜನ್ ಬೆಡ್, 399 ಐಸಿಯು ಬೆಡ್ ಹಾಗೂ 207 ವೆಂಟಿಲೆಟರ್ ಸೌಲಭ್ಯದ ಬೆಡ್ಗಳಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ತುರ್ತು ಸಂದರ್ಭದಲ್ಲಿ ಭದ್ರತೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು 725 ಹೊಮಗಾರ್ಡ, 164 ಸಿವಿಲ್ ಡಿಡೆನ್ಸ್ ಹಾಗೂ 466 ಜನ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಗಳು ಇದ್ದಾರೆ ಎಂದು ಹೇಳಿದರು.
ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ: 0836-2445308, 2441077 ಹಾಗೂ ಪೊಲೀಸ್ ಆಯುಕ್ತ ಕಚೇರಿ ಸಹಾಯವಾಣಿ ಸಂಖ್ಯೆ:0836-2233555 ಹಾಗೂ ಧಾರವಾಡ ಪೊಲೀಸ್ ಅಧೀಕ್ಷಕರ ಕಚೇರಿ ಸಹಾಯವಾಣಿ ಸಂಖ್ಯೆ: 0836-2233201 ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ದೇಶದಲ್ಲಿ ತುರ್ತು ಪರಿಸ್ಥಿತಿಯ ಬಂದಾಗ ಸಾರ್ವಜನಿಕರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಅಣುಕು ಪ್ರದರ್ಶನವನ್ನು ಕೈಗೊಂಡಿದ್ದು, ಅದರಲ್ಲಿ ಅನಿಲ ಸ್ಪೋಟಕವಾದಾಗ ಸಿಬ್ಬಂದಿಯವರು ಕಾರ್ಯಾಚರಣೆ ಮಾಡುವುದನ್ನು ಮತ್ತು ಅಗ್ನಿಶಾಮಕದಳದವರು ಅನಿಲ ಸೋರಿಕೆಯಾದಾಗ ತಮ್ಮ ಕೆಲಸವನ್ನು ಕಾರ್ಯರೂಪಕ್ಕೆ ತರುವುದನ್ನು ಅಣುಕ ಪ್ರದರ್ಶನದಲ್ಲಿ ತೊರಿಸಿದರು.
ಪೋಲೀಸ್ ಇಲಾಖೆಯಲ್ಲಿ ಹೋಂ ಗಾರ್ಡ್, ನಾಗರಿಕ ರಕ್ಷಣಾ ಘಟಕ ಮತ್ತು ಅಗ್ನಿಶಾಮಕದಳ ಹೇಗೆ ಸಾರ್ವಜನಿಕರನ್ನು ಮತ್ತು ಪ್ರಾಣಿ, ಪಕ್ಷಿಗಳನ್ನು ರಕ್ಷಿಸುತ್ತಾರೆ ಎಂಬುದನ್ನು ವೀಕ್ಷಿಸಿ, ಈ ಸಂದರ್ಭದಲ್ಲಿ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅನಿಲ ಸೋರಿಕೆ ಅನಾಹುತ ಘಟಿಸಿದಾಗ ಜನಸಾಮಾನ್ಯರನ್ನು ಹೇಗೆ ರಕ್ಷಿಸಬೇಕೆಂದು ಅಣುಕ ಪ್ರದರ್ಶನದ ಮೂಲಕ ವೀಕ್ಷಿಸಲಾಯಿತು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಆಪರೇಷನ್ ಅಭ್ಯಾಸ ಉದ್ದೇಶ ಯುದ್ಧದ ಸಂದರ್ಭದಲ್ಲಿ ತೊಂದರೆಯಾದಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಜನರಿಗೆ ಮತ್ತು ಜಾನುವಾರಗಳಿಗೆ ಯಾವುದೇ ಪ್ರಾಣ ಹಾನಿಯಾಗದಂತೆ ತಡೆಗಟ್ಟಲು ಈ ಅಣುಕ ಪ್ರದರ್ಶನವನ್ನು ಮಾಡಲಾಯಿತು ಎಂದರು.
ಒಂದು ಕಿಲೋಮೀಟರ್ ದೂರ ವ್ಯಾಪ್ತಿಯಲ್ಲಿ ಆಸ್ಪತ್ರೆ ಸ್ಥಾಪಿಸಿ, ಪ್ರಾಣಿಗಳಿಗೆ ಆಶ್ರಯ ಕೇಂದ್ರವನ್ನು ಮಾಡಿ ಅಲ್ಲಿ ಜಾನುವಾರಗಳಿಗೆ ಮತ್ತು ಸಾಕು ಪ್ರಾಣಿಗಳಿಗೆ ಹೇಗೆ ಚಿಕಿತ್ಸೆಯನ್ನು ಕೊಡಲಾಗುತ್ತದೆ ಎಂದು ತೋರಿಸಿದರು ಮತ್ತು ಆರೋಗ್ಯ ಇಲಾಖೆಯವರು ಸಿದ್ಧತೆಗಳನ್ನು ಮಾಡಿಕೊಂಡಿರುವ ಕ್ರಮವನ್ನು ಅಣುಕ ಪ್ರದರ್ಶನದ ಮೂಲಕ ಪ್ರದರ್ಶಿಸಲಾಯಿತು ಎಂದು ತಿಳಿಸಿದರು.
ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಕಂಪನಿಗಳಿದ್ದು, ಆ ಪ್ರದೇಶದಲ್ಲಿ ಅನಾಹುತಗಳು ಸಂಭವಿಸಿದ್ದಲ್ಲಿ ಜನರನ್ನು ರಕ್ಷಿಸಲು ಆ ಪ್ರದೇಶದಿಂದ ಸಂತ್ರಸ್ಥರನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಆ ಸ್ಥಳದಲ್ಲಿ 60ಕ್ಕೂ ಹೆಚ್ಚು ಬೆಡ್ಗಳಿದ್ದು, ಪರಿಹಾರ (ರೆಸ್ಕ್ಯೂ) ಕೇಂದ್ರಗಳನ್ನು ಮಾಡಿ, ಜನರನ್ನು ರಕ್ಷಿಸಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಅನಾಹುತ ಆದಲ್ಲಿ ಭಯಭೀತಿ ಆಗದ ಹಾಗೆ ನೋಡಿಕೊಳ್ಳುವ ಪ್ರಯತ್ನವನ್ನು ಅಣುಕು ಪ್ರದರ್ಶನದ ಮೂಲಕ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಮಾತನಾಡಿ, ಹುಬ್ಬಳ್ಳಿ ಧಾರವಾಡ ಭಾಗಗಳಲ್ಲಿ 1947 ರಿಂದ ಹಿಡಿದು ಇಲ್ಲಿಯವರೆಗೆ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ. ಆದರೆ ಮುಂದೆ ಸಂಭವಿಸಿದರೆ ನಾವು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದವರು ಸೂಚನೆ ನೀಡಿದ್ದರಿಂದ ಈ ಅಣಕ ಪ್ರದರ್ಶನ ಮಾಡುತ್ತಿದ್ದೇವೆ.
ಕೈಗಾರಿಕಾ ಪ್ರದೇಶಗಳಲ್ಲಿ ಏಕೆ ಈ ರೀತಿಯಾಗಿ ಮಾಡುತ್ತಿದ್ದೇವೆ ಎಂದರೆ ಒಂದು ಸ್ಥಳದಲ್ಲಿ ಘಟನೆ ನಡೆದರೆ ಬೇರೆ ಸ್ಥಳಗಳಿಗೂ ಬೇಗನೆ ಹರಡುವ ಸಂಭವ ಇರುತ್ತದೆ. ಪ್ರಾಣ ಹಾನಿ ಅತಿ ಹೆಚ್ಚಾಗಿ ಆಗುತ್ತದೆ ಎಂಬ ದೃಷ್ಟಿಯಿಂದ ಜನರು ಹೇಗೆ ಮುಂಜಾಗ್ರತಾ ಕ್ರಮವನ್ನು ವಹಿಸಬೇಕೆಂದು ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ತುರ್ತಾಗಿ ಆಸ್ಪತ್ರೆಯನ್ನು ಕೂಡ ಸ್ಥಾಪನೆ ಮಾಡಲಾಗಿದೆ. ಪ್ರಾಣಿಗಳಿಗೆ ಹಾನಿಯಾದರೆ ಅವುಗಳಿಗೂ ಹಾರೈಕೆ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ ಅವರು ಮಾತನಾಡಿ, ಬೇಲೂರು ಕೈಗಾರಿಕಾ ಪ್ರದೇಶದ ಹಿಂದೂಸ್ಥಾನ ಪೆಟ್ರೋಲಿಯಮ್ ಕಾಪೋರೇಶನ್ ಲಿಮಿಟೆಡ್ ಆವರಣದಲ್ಲಿ ಅಣುಕ ಪ್ರದರ್ಶನವನ್ನು ಮಾಡಿದ್ದೇವೆ. ಕರ್ನಾಟಕ ಸರ್ಕಾರದ ಸೂಚನೆಯಂತೆ ಪೋಲಿಸ್ ಇಲಾಖೆಯವರು, ಬೇಲೂರು ಕೈಗಾರಿಕಾ ಸಂಸ್ಥೆಯವರು, ಮತ್ತು ಬೇರೆ ಬೇರೆ ಕಾರ್ಖಾನೆಯವರು ನಮ್ಮ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ನಮ್ಮ ಇಲಾಖೆಯವರು ತುರ್ತು ವಾಹನಗಳಿಗೆ ಬರುವುದಕ್ಕೆ ಅನುಕೂಲ ಮಾಡಿಕೊಡುವುದು, ಸಾರ್ವಜನಿಕರು ಆ ಸ್ಥಳಗಳಿಗೆ ಹೋಗದ ಹಾಗೆ ನೋಡಿಕೊಳ್ಳುವುದು, ಬೇರೆ ರಸ್ತೆ ಮಾರ್ಗ ಕಲ್ಪಿಸಿ ಕೊಡುವುದು ಈ ತರಹದ ಎಲ್ಲ ಅನುಕೂಲವನ್ನು ಮಾಡಿದ್ದೇವೆ ಎಂದು ಹೇಳಿದರು.
ಅಣುಕ ಪ್ರದರ್ಶನ: ಧಾರವಾಡ ಜಿಲ್ಲೆಯ ಕೈಗಾರಿಕಾ ಸ್ಥಳಗಳಲ್ಲಿ, ಬೇರೆ ಬೇರೆ ಸ್ಥಳಗಳಿಗೆ ದಾಳಿ, ಮಾನವ ನಿರ್ಮಿತ ವಿಪತ್ತು ಸೇರಿದಂತೆ ಇನ್ನಿತರ ಅವಘಡಗಳು ನಡೆದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾಗರಿಕರನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಆಪರೇಶನ್ ಅಭ್ಯಾಸ ಹೆಸರಿನ ಅಣುಕ ಪ್ರದರ್ಶನದ ಮೂಲಕ ನಾಗರಿಕರ ರಕ್ಷಣೆಯ ತಾಲೀಮು ನಡೆಸಲಾಯಿತು.
ಒಂದೆಡೆ ಅನಿಲ ಸೋರಿಕೆ, ಇನ್ನೊಂದೆಡೆ ಬೆಂಕಿ ಅನಾಹುತದ ಸಂದರ್ಭವನ್ನು ಸೃಷ್ಟಿಸಿ, ಆಫರೇಶನ್ ಅಭ್ಯಾಸ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಟಿಸಿ, ಎಲ್ಲ ಸಿಬ್ಬಂದಿಗಳು ಸೇರಿ ತಾಲೀಮು ನಡೆಸಿದರು.
ನಗರದ ಹಿಂದೂಸ್ಥಾನ ಪೆಟ್ರೋಲಿಯಮ್ ಕಾಪೋರೇಶನ್ ಲಿಮಿಟೆಡ್ನಲ್ಲಿ ಅನಿಲ ಸೋರಿಕೆ ಸನ್ನಿವೇಶ ಸೃಷ್ಟಿಮಾಡಲಾಗಿತ್ತು. ಸೋರಿಕೆ ಆದ ತಕ್ಷಣ ಸೈರನ್ ಕೂಗಲು ಪ್ರಾರಂಭವಾಯಿತು. ತಕ್ಷಣ ಎಲ್ಲ ಕೆಲಸಗಾರರು ಓಡೋಡಿ ಬಂದು ಸುರಕ್ಷಿತವಾದ ಸ್ಥಳಕ್ಕೆ ಆಗಮಿಸಿದರು. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೆÇಲೀಸರು ಸಿಲುಕಿಕೊಂಡವರ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಳಿಕ ಆಂಬುಲೇನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸಿಬ್ಬಂದಿ ಅವರು ಸ್ಟ್ರೆಚರ್ ಮೂಲಕ ಆಂಬ್ಯುಲನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಯಿತು.
ಅಗ್ನಿ ಅವಘಡ ರೀತಿಯ ಅಣಕು ಸನ್ನಿವೇಶ ಸೃಷ್ಟಿ ಮಾಡಲಾಗಿತ್ತು. ಅದರಲ್ಲಿ ಗಾಯಗೊಂಡು ಬಿದ್ದಿದ್ದವರನ್ನು ರಕ್ಷಣಾ ಸಿಬ್ಬಂದಿ ಅವರು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಅಲ್ಲದೆ ಇದೇ ವೇಳೆ ಅಲ್ಲಿ ಇದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಯಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಕಂದಾರ ಪೊಲೀಸ್, ಅಗ್ನಿಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಆರೋಗ್ಯ, ಪಶುವಿದ್ಯಕೀಯ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಎಎಸ್ಪಿ ನಾರಾಯಣ ಬರಮಣಿ, ಖಾರ್ಕಾನೆ ಮತ್ತು ಬೈಲರ್ ಇಲಾಖೆ ಜಂಟಿ ನಿರ್ದೇಶಕ ರವಿಂದ್ರ ರಾಠೋಡ, ಉಪನಿರ್ದೇಶಕ ವೆಂಕಟೇಶ ರಾಠೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ರವಿ ಸಾಲಿಗೌಡರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಮ್.ಹೊನಕೇರಿ. ಧಾರವಾಡ ತಹಶೀಲ್ದಾರ ಡಾ.ಡಿ.ಎಚ್.ಹೂಗಾರ, ಎಚ್.ಪಿ.ಸಿ.ಎಲ್ ಪ್ಲಾಂಟ್ ಹೆಡ್ ರಾಜಕುಮಾರ, ಕೃಷಿ, ಆರೋಗ್ಯ, ಸಾರಿಗೆ ಇಲಾಖೆ ಅಧಿಕಾರಿಗಳು, ಇತರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.