ಬಳ್ಳಾರಿ,Jan.01 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯ ಕಾನೂನು ನೆರವು ಅಭಿರಕ್ಷಕರ ಹುದ್ದೆ 01, ಉಪ ಕಾನೂನು ನೆರವು ಅಭಿರಕ್ಷಕರ ಹುದ್ದೆ 01 ಮತ್ತು ಸಹಾಯಕ ಕಾನೂನು ನೆರವು ಅಭಿರಕ್ಷಕರ ಹುದ್ದೆ 01 ಇವುಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಮಾಹೆಯಾನ ಮುಖ್ಯ ಕಾನೂನು ನೆರವು ಅಭಿರಕ್ಷಕರ ಮಾಸಿಕ ವೇತನ ರೂ.70,000, ಉಪ ಕಾನೂನು ನೆರವು ಅಭಿರಕ್ಷಕರ ಮಾಸಿಕ ವೇತನ ರೂ.45,000 ಮತ್ತು ಸಹಾಯಕ ಕಾನೂನು ನೆರವು ಅಭಿರಕ್ಷಕರ ವೇತನ ರೂ.30,000 ಸಂಚಿತ ಸಂಭಾವನೆ ನೀಡಲಾಗುವುದು.
*ವಿದ್ಯಾರ್ಹತೆ:*
*ಮುಖ್ಯ ಕಾನೂನು ನೆರವು ಅಭಿರಕ್ಷಕರ ಹುದ್ದೆ:*
ಕನಿಷ್ಠ 10 ವರ್ಷಗಳ ಕಾಲ ಕ್ರಿಮಿನಲ್ ಕಾನೂನಿನಲ್ಲಿ ಅಭ್ಯಾಸ ಮಾಡಿರಬೇಕು. ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ ಹೊಂದಿರಬೇಕು. ಕ್ರಿಮಿನಲ್ ಕಾನೂನಿನ ಅತ್ಯುತ್ತಮ ತಿಳುವಳಿಕೆ, ರಕ್ಷಣಾ ಸಲಹೆಗಾರರ ನೈತಿಕ ಕರ್ತವ್ಯಗಳ ಸಂಪೂರ್ಣ ತಿಳುವಳಿಕೆ, ಸೆಷನ್ಸ್ ನ್ಯಾಯಾಲಯಗಳಲ್ಲಿ ಕನಿಷ್ಠ 30 ಕ್ರಿಮಿನಲ್ ವಿಚಾರಣೆಗಳನ್ನು ನಿರ್ವಹಿಸಿರಬೇಕು. 30 ಕ್ರಿಮಿನಲ್ ಪ್ರಕರಣಗಳ ನಿರ್ವಹಣೆಯ ಮೇಲಿನ ಷರತ್ತುಗಳನ್ನು ಸೂಕ್ತ ಸಂದರ್ಭಗಳಲ್ಲಿ ಸಡಿಲಿಸಬಹುದು. ಕಂಪ್ಯೂಟರ್ ವ್ಯವಸ್ಥೆಯ ಜ್ಞಾನ ಆದ್ಯತೆ, ಕಚೇರಿಯನ್ನು ನಿರ್ವಹಿಸುವ ಸಾಮರ್ಥ್ಯದೊಂದಿಗೆ ತಂಡವನ್ನು ಮುನ್ನಡೆಸಲು ಗುಣಮಟ್ಟ ಕೌಶಲ್ಯ ಹೊಂದಿರಬೇಕು.
*ಉಪ ಕಾನೂನು ನೆರವು ಅಭಿರಕ್ಷಕರ ಹುದ್ದೆ:*
ಕನಿಷ್ಠ 7 ವರ್ಷಗಳ ಕಾಲ ಕ್ರಿಮಿನಲ್ ಕಾನೂನಿನಲ್ಲಿ ಅಭ್ಯಾಸ ಮಾಡಿರಬೇಕು. ಕ್ರಿಮಿನಲ್ ಕಾನೂನಿನ ಅತ್ಯುತ್ತಮ ತಿಳುವಳಿಕೆ, ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ, ಕಾನೂನು ಸಂಶೋಧನೆಯಲ್ಲಿ ಕೌಶಲ್ಯ, ರಕ್ಷಣಾ ಸಲಹೆಗಾರರ ನೈತಿಕ ಕರ್ತವ್ಯಗಳ ಸಂಪೂರ್ಣ ತಿಳುವಳಿಕೆ, ಇತರರೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಬೇಕು. ಸೆಷನ್ಸ್ ನ್ಯಾಯಾಲಯಗಳಲ್ಲಿ ಕನಿಷ್ಠ 20 ಕ್ರಿಮಿನಲ್ ವಿಚಾರಣೆಗಳನ್ನು ನಿರ್ವಹಿಸಿರಬೇಕು, ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರು, ಎಸ್‌ಎಲ್‌ಎಸ್‌ಎ, ಅಸಾಧಾರಣ ಸಂದರ್ಭಗಳಲ್ಲಿ ಸಡಿಲಗೊಳಿಸಬಹುದು. ಕೆಲಸದಲ್ಲಿ ಪ್ರಾವೀಣ್ಯತೆಯೊಂದಿಗೆ ಐಟಿ ಜ್ಞಾನ ಹೊಂದಿರಬೇಕು.
*ಸಹಾಯಕ ಕಾನೂನು ನೆರವು ಅಭಿರಕ್ಷಕರ ಹುದ್ದೆ:*
ಕ್ರಿಮಿನಲ್ ಕಾನೂನಿನಲ್ಲಿ 3 ವರ್ಷಗಳವರೆಗೆ ಅಭ್ಯಾಸ ಮಾಡಿರಬೇಕು. ಉತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ, ರಕ್ಷಣಾ ಸಲಹೆಗಾರರ ನೈತಿಕ ಕರ್ತವ್ಯಗಳ ಸಂಪೂರ್ಣ ತಿಳುವಳಿಕೆ, ಇತರರೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ. ಅತ್ಯುತ್ತಮ ಬರವಣಿಗೆ ಮತ್ತು ಸಂಶೋಧನಾ ಕೌಶಲ್ಯ, ಕೆಲಸದಲ್ಲಿ ಹೆಚ್ಚಿನ ಪ್ರಾವೀಣ್ಯತೆಯೊಂದಿಗೆ ಐಟಿ ಜ್ಞಾನ ಹೊಂದಿರಬೇಕು.
ನೇಮಕಾತಿಗಳು ತಾತ್ಕಾಲಿಕವಾಗಿದ್ದು, ಪ್ರಾಧಿಕಾರವು ನೇಮಕಾತಿಯನ್ನು ಯಾವುದೇ ನೋಟೀಸನ್ನು ನೀಡದೆ ರದ್ದುಗೊಳಿಸುವ ಅಧಿಕಾರ ಹೊಂದಿರುತ್ತದೆ.
ಅಭ್ಯರ್ಥಿಗಳು ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು ಹಾಗೂ ಇತ್ತೀಚಿನ 3 ಪಾಸ್ ಪೋಟೋ ಲಗತ್ತಿಸಬೇಕು.
ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ತಾಳೂರು ರಸ್ತೆಯ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.