ಕಲಘಟಗಿಯಲ್ಲಿ ಜನತಾ ದರ್ಶನ: ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌

Ravi Talawar
ಕಲಘಟಗಿಯಲ್ಲಿ ಜನತಾ ದರ್ಶನ: ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌
WhatsApp Group Join Now
Telegram Group Join Now
ಧಾರವಾಡ:  ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಜನತಾ ದರ್ಶನವನ್ನು ಆಯೋಜನೆ ಮಾಡಲಾಗುತ್ತಿದ್ದು, ಈವರೆಗೆ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ 17 ಜನತಾ ದರ್ಶನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಇದು 18ನೇ ಜನತಾ ದರ್ಶನ ಕಾರ್ಯಕ್ರಮವಾಗಿದೆ. ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಇದೊಂದು ಉತ್ತಮ ವೇದಿಕೆ ಎಂದು ಕಾರ್ಮಿ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್ ಲಾಡ್ ಅವರು ಹೇಳಿದರು.
‌ ಕಲಘಟಗಿಯ ಬಮ್ಮಿಗಟ್ಟಿ ಕ್ರಾಸ್ ಹತ್ತಿರದ ಪಟ್ಟಣ ಪಂಚಾಯತಿಯ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತದ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರು ಸಾಕಷ್ಟು ಸಮಸ್ಯೆಗಳನ್ನು ಜನತಾ ದರ್ಶನದಿಂದ ಪರಿಹರಿಸಿಕೊಂಡಿದ್ದಾರೆ. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರೆ, ಇತರ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳು ಕಡಿಮೆ ಸಮಯದಲ್ಲೇ ಬಗೆಹರಿಸಿವೆ. ವಿಧವಾ ವೇತನ, ವೃದ್ಧಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭೂಮಿ ಒತ್ತುವರಿ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಜನತಾ ದರ್ಶನ ಸಹಾಯಕವಾಗಿದೆ ಎಂದರು.
ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೊರ ಗುತ್ತಿಗೆದಾರ ನೌಕರರಾಗಿ ಕೆಲಸ ಮಾಡುತ್ತಿರುವ ಪರಶುರಾಮ್ ಪಾಟೀಲ ಅವರು 3, 4 ತಿಂಗಳಿಂದ ಸಂಬಳ ವಿಳಂಬವಾಗಿದೆ ಎಂದು ಸಚಿವರಲ್ಲಿ ಅಳಲು ತೋಡಿಕೊಂಡರು. ತಕ್ಷಣ ಸಮಸ್ಯೆ ಪರಿಹರಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಮಾವಿನಕೊಪ್ಪ ಗ್ರಾಮದ ರೆಹಮಾನ ಖಾದರಸಾಬ್ ನದಾಫ್ ಅವರು, ಅರಣ್ಯ ಇಲಾಖೆಯಿಂದ ಕೃಷಿ ಭೂಮಿ ಅತಿಕ್ರಮಣವಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಿಶ್ರಿಕೋಟಿ ಗ್ರಾಮದ ಬಸವರಾಜ ಬೆಲ್ಲದ ಅವರು ಅಪಾರ ಪ್ರಮಾಣದ ಮಳೆಯಿಂದ ಬೆಳೆ ಹಾನಿ ಆಗಿದ್ದು, ಬೆಳೆ ವಿಮೆ ವಿಳಂಬವಾಗಿದೆ ಎಂದು ಸಚಿವರಿಗೆ ತಿಳಿಸಿದರು. ಬೆಳೆ ವಿಮೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಂಕರ ರಾಮು ಲಮಾಣಿ ಅವರು ತಮ್ಮ ಆಸ್ತಿ ಇ ಸ್ವತ್ತು ಮಾಡಿಕೊಳ್ಳಲು ಒಂದು ವರ್ಷದಿಂದ ಅಲೆದಾಟ ಮಾಡುತ್ತಿದ್ದೇನೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ರೇಣುಕಾ ದೇವೇಂದ್ರ ಲಮಾಣಿ ಅವರು ಹೈನುಗಾರಿಕೆ ಯೋಜನೆಗೆ ಅರ್ಜಿ ಹಾಕಲಾಗಿದೆ. ಆದರೆ ಒಂದು ವರ್ಷವಾದರೂ ಸಹ ಯೋಜನೆಗೆ ಆಯ್ಕೆ ಮಾಡಿಲ್ಲ ಎಂದು ಮನವಿ ಮಾಡಿದರು. ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ  ಒಂದು ವರ್ಷದಿಂದ ಕುಡಿಯುವ ನೀರು , ವಿದ್ಯುತ್ ಹಾಗೂ ಯಾವುದೇ ಕನಿಷ್ಠ ಸೌಲಭ್ಯಗಳು ಇಲ್ಲವಾಗಿವೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಚಿವರಲ್ಲಿ  ಮನವಿ ಸಲ್ಲಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷರಾದ ಎಸ್.ಆರ್.ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ವೈಷ್ಣವಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಬಿರಾದಾರ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article