ಬೆಂಗಳೂರು, ಅಕ್ಟೋಬರ್ 05: ಹುಬ್ಬಳ್ಳಿಯಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲದ ಚಟುವಟಿಕೆಗಳ ಬಗ್ಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಗುರುಕುಲದ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಈ ಸಂದರ್ಭದಲ್ಲಿ ಹಲವು ಸೂಚನೆಗಳನ್ನು ನೀಡಿದರು.
ಗುರುಕುಲಕ್ಕೆ ಬಿಡುಗಡೆಯಾಗಬೇಕಾದ ಅನುದಾನ ಯಾಕೆ ಬಿಡುಗಡೆಯಾಗಿಲ್ಲ. ಇದರಿಂದ ಗುರುಕುಲದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮುಂದಿನ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಸಚಿವರೊಂದಿಗೆ ಸಭೆ ಆಯೋಜಿಸಬೇಕು ಎಂದು ಅಲಹೆ ನೀಡಿದರು.
ಅನುದಾನಕ್ಕೆ ಪ್ರಸ್ತಾವ ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದರು.
ಸರ್ಕಾರದಿಂದ ಹಣ ಬಿಡುಗಡೆಯಾದರೆ ಎಲ್ಲಾ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಲು ಸಾಧ್ಯ ಎಂದು ಸಭೆಯಲ್ಲಿ ಹಾಜರಿದ್ದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ವಿ ಬೆಟ್ಟಕೋಟೆ ಅವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ಆರ್ಥಿಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.