ಧಾರವಾಡ : ನಗರದ ಸರಸ್ವತಪುರದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ನಂ.9 ಕ್ಕೆ ಇಂದು ಸಂಜೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ದಿಢೀರ್ ಭೇಟಿ ನೀಡಿ, ಶಿಕ್ಷಕರ ಮತ್ತು ಮಕ್ಕಳ ಹಾಜರಾತಿ, ಶಾಲೆ ಕಟ್ಟಡ ಪರಿಶೀಲಿಸಿದರು.
ಶಾಲಾ ಕಟ್ಟಡ ಸೋರಿಕೆ ಕುರಿತು ಸಾರ್ವಜನಿಕ ದೂರು ಹಿನ್ನಲೆಯಲ್ಲಿ ಅವರು ಇಂದು ಕಲಘಟಗಿ ರಸ್ತೆಯ ಸರಸ್ವತಪುರದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಕಟ್ಟಡ ಸೋರಿಕೆ ಹಾಗೂ ತರಗತಿಗಳ ಸುಸ್ಥಿತಿ ಬಗ್ಗೆ ಪರಿಶೀಲಿಸಿದರು.
ಪ್ರತಿ ತರಗತಿಗೆ ಹೋಗಿ, ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತವಾಗಿ ವಿತರಿಸಿರುವ ಸಮವಸ್ತ್ರ, ಪಠ್ಯಪುಸ್ತಕಗಳ ಬಗ್ಗೆ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು. ಕೆಲವು ವಿದ್ಯಾರ್ಥಿಗಳು ಸಮವಸ್ತ್ರ ಧರಿಸದಿರುವುದನ್ನು ಗಮನಿಸಿ, ನಾಳೆ ಬೆಳಿಗ್ಗೆ ಎಲ್ಲರಿಗೂ ಎರಡೂ ಜೊತೆ ಸಮವಸ್ತ್ರ ವಿತರಿಸಿ, ಖುದ್ದು ತಮ್ಮ ಕಚೇರಿಗೆ ಶಾಲಾ ಮುಖ್ಯಸ್ಥರು ಶಾಲಾ ಅವಧಿ ನಂತರ ಆಗಮಿಸಿ ಮಾಹಿತಿ ಸಲ್ಲಿಸಲು ಅವರು ಸೂಚಿಸಿದರು.
ಶಾಲೆಯಲ್ಲಿ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹಾಜರಿದ್ದು, ಮಕ್ಕಳ ಹಾಜರಾತಿ ಖಚಿತ ಪಡಿಸಿಕೊಳ್ಳಬೇಕು. ಈ ಶಾಲೆಗೆ ಕೊಳಚೆ ಪ್ರದೇಶದ, ಹಿಂದುಳಿದ ಪ್ರದೇಶದ ಮಕ್ಕಳು ಹೆಚ್ವು ದಾಖಲಾಗುವದರಿಂದ ಮಕ್ಕಳಿಗೆ ಉತ್ತಮ ಓದು,ಬರಹ ಕಲಿಸಬೇಕು. ಪ್ರತಿ ಕೊಣೆಯಲ್ಲಿ ಉತ್ತಮ ಗಾಳಿ, ಬೆಳಕು ಬರುವಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಹಾಗೂ ಶಾಲೆಯ ಆವರಣದಲ್ಲಿ ಶಿಸ್ತು, ಸ್ವಚ್ಛತೆ ಕಾಪಾಡಬೇಕು ಎಂದರು.
ಶಾಲೆಯ ಕಟ್ಟಡ ಸೋರಿಕೆ ಹಾಗೂ ಹೆಚ್ಚುವರಿ ಕೊಣೆಗಳ ದುರಸ್ತಿಗಾಗಿ ಈಗಾಗಲೇ ಜಿಲ್ಲಾ ಪಂಚಾಯತದಿಂದ ಅನುದಾನ ಬಿಡುಗಡೆ ಆಗಿದ್ದು, ಗುತ್ತಿಗೆದಾರ ಕಾಮಗಾರಿ ಅರಂಭಿಸಿದ್ದಾರೆ. ಶಿಕ್ಷಕರು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಶಾಲೆಯ ಸುಧಾರಣೆ, ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಮತ್ತು ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳುವ ಕಾಮಗಾರಿಗಳಿಗೆ ಯಾವುದೇ ವ್ಯಕ್ತಿ, ಸಂಸ್ಥೆಗಳು ತಡೆ, ತೊಂದರೆ, ತಕರರಾರು ಮಾಡಿದರೆ ಪೊಲೀಸ್ ದೂರು ನೀಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಡಿಡಿಪಿಐ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸರಸ್ವತಪುರ ಶಾಲೆಯಲ್ಲಿ ಈಗ 139 ವಿದ್ಯಾರ್ಥಿಗಳ ದಾಖಲಾತಿ ಇದೆ. ಹಿಂದಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಆಗಿದೆ. ಏಳು ಜನ ಪೂರ್ಣಾವಧಿ ಶಿಕ್ಷಕರಿದ್ದಾರೆ. ಐದು ಕೋಣೆಗಳಿವೆ. ಹೆಚ್ಚುವರಿ ಕೊಣೆಗಳ ಸೌಲಭ್ಯ ಮಾಡಲಾಗುತ್ತಿದೆ. ಶಿಕ್ಷಕರು ಹೆಚ್ಚು ಕಾಳಜಿ ವಹಿಸಿ, ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
*ಸಂವಿಧಾನ ಪಿಠೀಕೆ ಹೇಳಿದ ವಿದ್ಯಾರ್ಥಿಗೆ ಡಿಸಿ ಭೇಷ್ :* ಸರಕಾರಿ ಶಾಲೆಯ ನಲಿಕಲಿ ವರ್ಗಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದಾಗ, ಪುಟ್ಟ ಮಕ್ಕಳು ಪ್ರೀತಿಯಿಂದ ಸ್ವಾಗತಿಸಿದರು.
2ನೇ ವರ್ಗದ ಪುಟ್ಟ ಬಾಲಕ ಸಂತೋಷ ಸುಲಬ್ಬನವರ ಜಿಲ್ಲಾಧಿಕಾರಿಗಳಿಗೆ ಭಾರತ ಸಂವಿಧಾನದ ಪಿಠೀಕೆಯನ್ನು ಪುಸ್ತಕ ನೋಡದೇ ನಿರ್ಹಳವಾಗಿ ಹೇಳಿದ್ದನ್ನು ಖುಷಿಯಿಂದ ಕೇಳಿದ ಜಿಲ್ಲಾಧಿಕಾರಿಗಳು, ಆ ವಿದ್ಯಾರ್ಥಿಯ ಕೈ ಕುಲುಕಿ ವಿಶ್ ಮಾಡಿದರು. ಬೆನ್ನು ತಟ್ಟಿ ಭೇಷ್ ಎಂದು ಮುದ್ದು ಮಾಡಿದರು. ಚಾಕೋಲೇಟ್ ನೀಡಿ, ಮಗುವಿಗೆ ಖುಷಿ ಪಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ, ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಹಲಕುರ್ಕಿ ಸೇರಿದಂತೆ ಇತರ ಶಿಕ್ಷಕರು ಇದ್ದರು.