ಧಾರವಾಡ : ಭವಿಷ್ಯತ್ತಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳು ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗಾಗಿ ಗ್ರಾಮ ಹಾಗೂ ಕ್ಷೇತ್ರಮಟ್ಟದ ಮೂಲಬೇಡಿಕೆಗಳಿಗೆ ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನೆಯಲ್ಲಿ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು (ಅ.31) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ 2026-27 ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಸುವ ಕುರಿತು ಜರುಗಿದ ಪುನರ್ ಮನನ ಕಾರ್ಯಾಗಾರ ಉದ್ದೇಶಿಸಿ, ಮಾತನಾಡಿದರು.
ಜಿಲ್ಲಾ ಅಭಿವೃದ್ಧಿಯ ಯೋಜನಾ ವರದಿಯನ್ನು ರೂಪಿಸುವಾಗ ಗ್ರಾಮೀಣ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ಸಮನ್ವಯಗೊಳಿಸಬೇಕು. ಮತ್ತು ಸ್ಥಳೀಯ ಅವಶ್ಯಕತೆಗಳು, ಮೂಲಭೂತ ಸೌಕರ್ಯ, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಾರ್ಷಿಕ ಅಭಿವೃದ್ಧಿ ಯೋಜನಾ ವರದಿಯಲ್ಲಿ ಗ್ರಾಮಸ್ಥರ ಹಾಗೂ ನಗರವಾಸಿಗಳ ಆಶೋತ್ತರಗಳನ್ನು ಒಳಗೊಂಡಿರಬೇಕು. ಆದರೆ ಯೋಜನೆಗಳು ಪ್ರತಿರೂಪವಾಗದಂತೆ ಎಚ್ಚರಿಕೆ ವಹಿಸಬೇಕು. ಲಭ್ಯವಾಗಿರುವ ಅನುದಾನವನ್ನು ಗಮನಿಸಿ, ಯೋಜನೆಗಳನ್ನು ರೂಪಿಸಬೇಕು. ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ಕೃಷಿಗೆ ಪೂರಕವಾದ ಇಲಾಖೆಗಳು ಸಮಾಜ ಕಲ್ಯಾಣ, ಕ್ರೀಡೆ ಹೀಗೆ ಮುಖ್ಯವಾದ ಇಲಾಖೆಗಳ ಆಶಯಗಳನ್ನು ಪ್ರತಿನಿಧಿಸುವಂತೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಮತ್ತು ಪಟ್ಟಣ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ ಒಳಗೊಂಡಂತೆ ಎಲ್ಲ ಹಂತದ ನಗರ ಸ್ಥಳೀಯ ಸಂಸ್ಥೆಗಳ ಬೇಡಿಕೆಗಳನ್ನು ಪ್ರತಿನಿಧಿಸುವಂತೆ ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನಾ ವರದಿಯನ್ನು ರೂಪಿಸಬೇಕೆಂದು ಅವರು ತಿಳಿಸಿದರು.
ಜಿಲ್ಲಾ ಯೋಜನಾ ಸಮಿತಿಯ ಸದಸ್ಯಕಾರ್ಯದರ್ಶಿಗಳು ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಗ್ರಾಮದ ಬೇಡಿಕೆಗಳ ಪಟ್ಟಿಯನ್ನು ತಯ್ಯಾರಿಸಿ, ತಾಲೂಕು ಹಂತದಲ್ಲಿ ಮತ್ತು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ ಸೇರ್ಪಡೆಗೊಳಿಸಲು ಕ್ರಮವಹಿಸಬೇಕು. ಕ್ರೂಢಿಕರಿಸಲಾದ ಪ್ರಸ್ತಾವನೆಗಳನ್ನು ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳನ್ನಾಗಿ ವಿಗಂಡಿಸಿ, ಇಲಾಖಾವಾರು ರೂಪಿಸಬೇಕು ಎಂದು ಅವರು ಹೇಳಿದರು.
ಗ್ರಾಮ ಪಂಚಾಯತಿಗಳು, ವಾರ್ಡ್ ಸಭೆಗಳ ಮೂಲಕ ಅಗತ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಾಸ್ತಾವನೆಯನ್ನು ಮತ್ತು ಸ್ವೀಕೃತ ಪ್ರಸ್ತಾವನೆಗಳನ್ನು ಇಲಾಖಾವಾರು ವಿಗಂಡಿಸಿ, ಪ್ರತ್ಯೇಕ ಅನುಬಂಧಗಳನ್ನು ಮಾಡಿಕೊಳ್ಳಬೇಕು. ಅವುಗಳನ್ನು ಗ್ರಾಮ ಪಂಚಾಯತ ಸಮಿತಿ ಸಭೆಯಲ್ಲಿ ಮಂಡಿಸಿ, ನವೆಂಬರ್ 3 ರೊಳಗೆ ಅನುಮೋದನೆ ಪಡೆದು ತಾಲೂಕು ಪಂಚಾಯತಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ತಾಲೂಕಾ ಯೋಜನಾ ಮತ್ತು ಅಭಿವೃದ್ಧಿ ಸಮಿತಿ ರಚಿಸಿ, ಗ್ರಾಮ ಪಂಚಾಯತ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳನ್ನು ಕ್ರೂಢಿಕರಿಸಿ, ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿಯಿಂದ ಅನುಮೋದನೆ ಪಡೆದು ಜಿಲ್ಲಾ ಪಂಚಾಯತಿಗೆ ನವೆಂಬರ್ 7 ರೊಳಗೆ ಸಲ್ಲಿಸಬೇಕು. ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸಿ, ತಾಲೂಕಾ ಪಂಚಾಯತ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯನ್ನು ಕ್ರೂಢಿಕರಿಸಿ, ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದು ನವೆಂಬರ್ 15 ರೊಳಗೆ ಸರ್ಕಾರಕ್ಕೆ ಸಲ್ಲಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಸೂಚಿಸಿದರು.
ವೇದಿಕೆಯಲ್ಲಿ ಪ್ರೋಬೆಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ ಇದ್ದರು. ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಾಗಾರ ನಿರ್ವಹಿಸಿದರು. ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಮಾರುತಿ ತಳವಾರ ವಂದಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.


