ಧಾರವಾಡ : ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ರಾಜ್ಯದ್ಯಾಂತ ಅನುಷ್ಠಾನಗೊಂಡಿವೆ. ಈ ಕುರಿತು ಜಿಲ್ಲಾಮಟ್ಟದಲ್ಲಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ಕಿರುಪುಸ್ತಕವನ್ನು ಬಿಡುಗಡೆಗೊಳಿಸಲು ಸರ್ಕಾರವು ನಿರ್ದೇಶನ ನೀಡಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಕುರಿತು ಸಮಗ್ರ ಮಾಹಿತಿಯನ್ನು ವಾರ್ತಾ ಇಲಾಖೆಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯಕ್ಕೆ ಭೇಟಿ ನೀಡಿದ್ದ ವಿಶ್ವಸಂಸ್ಥೆಯ ತಂಡವು ಶ್ಲಾಘಿಸಿದೆ.
ರಾಜ್ಯ ಸರ್ಕಾರದ ಈ ಯೋಜನೆಗಳು ಇತರ ಸರ್ಕಾರಗಳಿಗೆ ಮಾದರಿಯಾಗಿದ್ದು, ಈ ಕುರಿತು ಜಿಲ್ಲಾಮಟ್ಟದಲ್ಲಿ ಆಯಾ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಇರುವ ಕಿರು ಪುಸ್ತಕವನ್ನು ಪ್ರಕಟಿಸಲು ಸೂಚಿಸಲಾಗಿದೆ. ಅಧಿಕಾರಿಗಳು ತಮಗೆ ಸಂಬಂಧಿಸಿದ ಗ್ಯಾರಂಟಿ ಯೋಜನೆಯ ಕಿರು ಪರಿಚಯ, ಯಶೋಗಾಥೆ ಮತ್ತು ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಿ, ಪ್ರಕಟಣಾ ಸ್ವರೂಪದಲ್ಲಿ ಕ್ರೂಢಿಕರಿಸಿ ವಾರ್ತಾ ಇಲಾಖೆಗೆ ತ್ವರೀತವಾಗಿ ಸಲ್ಲಿಸಬೇಕೆಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಕುರಿತಾಗಿ ಸಲ್ಲಿಕೆಯಾಗುವ ದತ್ತಾಂಶ, ಮಾಹಿತಿಯನ್ನು ಪರಿಶೀಲಿಸಿ, ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಿ, ಅಂತಿಮಗೊಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಕಿರು ಪುಸ್ತಕವು ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ಮತ್ತು ಸಾಧನೆಗಳನ್ನು ದಾಖಲಿಕರಿಸುವ ರೀತಿಯಲ್ಲಿ ರೂಪಗೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ಯೋಜನಾ ಮಾಹಿತಿ ಸಂಗ್ರಹಿಸುವಾಗ ಇದನ್ನು ಗಮನಿಸಬೇಕು ಎಂದು ಹೇಳಿದರು. ವಾರ್ತಾ ಇಲಾಖೆಯ ಜಿಲ್ಲಾ ಸಹಾಯಕ ವಾರ್ತಾಧಿಕಾರಿ ಡಾ.ಎಸ್.ಎಮ್.ಹಿರೇಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ, ಹೆಸ್ಕಾಂ ಕಾರ್ಯಪಾಲಕ ಅಭಿಯಂತರಾದ ಅರವಿಂದ ಗದಗಕರ ಮತ್ತು ಎಮ್.ಟಿ.ಕಾಂಬಳೆ, ಎನ್ಡಬ್ಲ್ಯೂಕೆಎಸ್ಆರ್ಟಿಸಿ. ಯ ವಿಭಾಗೀಯ ನಿಯಂತ್ರಾಧಿಕಾರಿಯಾದ ಡಾ.ಶಶಿಧರ ಚನ್ನಪ್ಪಗೌಡರ, ಎಚ್. ರಾಮನಗೌಡರ ಹಾಗೂ ಉದ್ಯೋಗ ಮತ್ತು ತರಬೇತಿಯ ಅಧಿಕಾರಿಗಳು ಭಾಗವಹಿಸಿದ್ದರು.