ಮೂಡಲಗಿ: ಇಂದಿರಾ ಗಾಂಧಿಯವರು ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ಕ್ಷೀರ ಕ್ರಾಂತಿ, ಹಸಿರುಕ್ರಾಂತಿ, ಭೂ ಒಡೆಯದಂತಹ ಕ್ರಾಂತಿಕಾರಿ ಖಾಯ್ದೆಗಳನ್ನು ಜಾರಿಗೆ ತಂದು, ದೇಶದ ಜನತೆಯ ಮನೆ ಮನಗಳಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೇ ಸುಜಾತಾ ಹಿರೇಮಠ ಹೇಳಿದರು.
ಮಂಗಳವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಇಂದಿರಾಗಾಂಧಿಯವರ ಜನ್ಮದಿನದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು ಇಂದಿರಾಗಾಂಧಿಯವರು ದೇಶ ಕಂಡ ಅಪ್ರತಿಮ ಪ್ರಧಾನಿಯಾಗಿ ಬಡ ಜನರ ನಾಡಿ ಮಿಡಿತ ಚೆನ್ನಾಗಿ ಅರಿತು, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಮುಖಂಡ ಇಜಾಜ್ ಅಹ್ಮದ್ ಕೊಟ್ಟಲಗಿ ಮಾತನಾಡಿ ಉಕ್ಕಿನ ಮಹಿಳೆಯೆಂದೇ ಖ್ಯಾತರಾಗಿದ್ದ ಇಂದಿರಾಗಾಂಧಿಯವರು, ಅನೇಕ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದಲ್ಲದೇ, ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ದೇಶದಲ್ಲಿ ಕಾರ್ಖಾನೆಗಳು, ರಸ್ತೆ ಗಳಂತಹ ಜನಪರ ಕಾರ್ಯಗಳನ್ನು ಮಾಡುತ್ತ, ದೇಶ ಕಂಡ ನೆಚ್ಚಿನ ಪ್ರಧಾನಿಗಳಾಗಿ ಮನೆ ಮಾತಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಇಂದಿರಾಗಾಂಧಿಯವರ ಜನ್ಮದಿನದ ಪ್ರಯುಕ್ತ ಆಶಾಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೆ, ಬಡ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಪತ್ರಿಕಾ ವಿತರರಿಗೆ ಪೆನ್,ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಅರಭಾವಿ ಮಂಡಲದ ಅಧ್ಯಕ್ಷ ಸುರೇಶ್ ಮಗದುಮ್, ಕಾಂಗ್ರೆಸ್ ಅಲ್ಪಸಂಖ್ಯಾತರ ಕಾರ್ಯಾಧ್ಯಕ್ಷ ರಫೀಕ್ ಪೈಲ್ವಾನ್, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ತಹಸೀಲ್ದಾರ್ ಕಚೇರಿಯಿಂದ ವಾಯ್.ಎಮ್.ಉದ್ದಪ್ಪನವರ್, ಪುರಸಭೆಯಿಂದ ಲಲಿತಾ ಜಾಧವ, ಕಾಂಗ್ರೆಸ್ ಅರಭಾವಿ ಘಟಕದ ಅಲ್ಪಸಂಖ್ಯಾತರ ಉಪಾಧ್ಯಕ್ಷೆ ಕೌಸರ್ ತಹಶೀಲ್ದಾರ್, ಕಾಂಗ್ರೆಸ್ ಕೌಜಲಗಿ ಘಟಕದ ಅಲ್ಪಸಂಖ್ಯಾತರ ಉಪಾಧ್ಯಕ್ಷೆ ದಿಲ್ ಶಾದ ಹವಾಲ್ದಾರ್, ಕಾಂಗ್ರೆಸ್ ಮಹಿಳಾ ಸದಸ್ಯರಾದ ರೇಶ್ಮಾ ಕಡಬಿಶಿವಾಪೂರ್, ಶ್ರೀಧರ್ ಹಿರೇಮಠ್, ದಾವಲ್ ಡಾಂಗೆ, ಸೋಹೆಲ್ ಮುಲ್ಲಾ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.