ರಾಯಬಾಗ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯ ಸೌಲಭ್ಯ ಮರು ಜಾರಿಗೊಳಿಸಲು ಮೇಲ್ಮನೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಸೋಮವಾರ ಪಟ್ಟಣದ ಶಾಸಕರ ಗೃಹ ಕಚೇರಿ ಸಭಾಂಗಣದಲ್ಲಿ ಶಾಸಕರ (ವಿಧಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ) ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಅನುದಾನಿತ ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ ಕಂಪ್ಯೂಟರ್, ಸ್ಕ್ಯಾನರ್ ಮತ್ತು ಪ್ರಿಂಟರ್ ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ಸರ್ಕಾರ ಹೇಳುವ ಶೇ.100 ಪರೀಕ್ಷೆ ಫಲಿತಾಂಶ ಪಡೆಯಲು ಶಿಕ್ಷಕರಿಗೆ ಅಸಾಧ್ಯವಾಗಿದೆ. ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಆದರೆ ಮಾತ್ರ ಶಿಕ್ಷಣ ಕ್ಷೇತ್ರ ಸುಧಾರಿಸಲು ಸಾಧ್ಯ ಎಂದರು. ಶಿಕ್ಷಕರ ಎಲ್ಲ ಬೇಡಿಕೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ, ತಮ್ಮ ಎಲ್ಲ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಡಿ.ಎಮ್.ಐಹೊಳೆ ಅವರು ಮಾತನಾಡಿ, ಶಿಕ್ಷಕರ ಎಲ್ಲ ಬೇಡಿಕೆ ಮತ್ತು ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರಕ್ಕೆ ದೊರೆಯುವ ಎಲ್ಲ ಸೌಲಭ್ಯಗಳು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಜಿನೇಂದ್ರ ನಿಲಜಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಚಿಕ್ಕೋಡಿ ಡಿಡಿಪಿಐ ಆರ್.ಸೀತಾರಾಮ ಮಾತನಾಡಿದರು.
ಬಿಇಒ ಬಸವರಾಜಪ್ಪ ಆರ್, ಎಲ್.ಬಿ.ಚೌಗುಲೆ, ಪೃಥ್ವಿರಾಜ ಜಾಧವ, ಎಸ್.ಎಸ್. ಮಠದ, ರಾಮು ಹೂಗಾರ, ವಿ.ಎಸ್.ಪೂಜಾರಿ, ಬಸವರಾಜ ಯಲಶೆಟ್ಟಿ, ಬಸವರಾಜ ಕಾಂಬಳೆ, ಸದಾನಂದ ಹಳಿಂಗಳಿ, ಅಣ್ಣಾಸಾಹೇಬ ಖೆಮಲಾಪೂರೆ, ಸುರೇಶ ಮಾಳಿ, ಜಿಯಾವುಲ್ಲ ಮುಲ್ಲಾ, ಕರೇಪ್ಪ ನಾಯಿಕ ಹಾಗೂ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಕಾಲೇಜ ಪ್ರಾಚಾರ್ಯರು ಇದ್ದರು.
ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಶಾಸಕರ ಗೃಹ ಕಚೇರಿ ಸಭಾಂಗಣದಲ್ಲಿ ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಅನುದಾನಿತ ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ ಕಂಪ್ಯೂಟರ್, ಸ್ಕ್ಯಾನರ್ ಮತ್ತು ಪ್ರಿಂಟರ್ ಗಳನ್ನು ವಿಧಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ ಹಾಗೂ ಶಾಸಕ ಡಿ.ಎಮ್.ಐಹೊಳೆ ವಿತರಿಸಿದರು. ಆರ್.ಸೀತಾರಾಮ, ಬಸವರಾಜಪ್ಪ ಆರ್, ಜಿನೇಂದ್ರ ನಿಲಜಗಿ ಇತರರು ಇದ್ದರು.


