ಬೆಂಗಳೂರು, ಜುಲೈ.23: ಕೆಎಸ್ಆರ್ಟಿಸಿ , ಬಿಎಂಟಿಸಿ ಸಾರಿಗೆ ಬಸ್ ಚಾಲಕ, ನಿರ್ವಾಹಕರಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗಿದ್ದು ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಹೀಗಾಗಿ ಸಾರಿಗೆ ಇಲಾಖೆ ಕೆಲಸದ ಸಮಯದಲ್ಲಿ ರೀಲ್ಸ್ ಮಾಡಿದರೆ ಸಸ್ಪೆಂಡ್ ಮಾಡಿ ಮನೆಗೆ ಕಳಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಇದೇ ಹಾದಿ ತುಳಿದ ಪೊಲೀಸ್ ಇಲಾಖೆ ಕೂಡ ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದಾರೆ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಮವಸ್ತ್ರದಲ್ಲಿ ಅಶಿಸ್ತು ತೋರಿಸುವ ಸಿಬ್ಬಂದಿಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪೊಲೀಸ್ ಕರ್ತವ್ಯಗಳಿಗೆ ಸಂಬಂಧಿಸದ ವಿಷಯಗಳಲ್ಲಿ ಫೋಟೋ, ರೀಲ್ಸ್ ಅಪ್ಲೋಡ್ ಮಾಡುವಂತಿಲ್ಲ. ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಇದರ ಬಳಕೆಯು ಈ ಮೌಲ್ಯಗಳನ್ನು ಪ್ರತಿ ಬಿಂಬಿಸುವಂತಿರಬೇಕಾಗುತ್ತದೆ. ಹಾಗಾಗಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವವರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ಖಡಕ್ ಸೂಚನೆ ನೀಡಲಾಗಿದೆ.
ರೀಲ್ಸ್ ಮಾಡುವ ಕೆಎಸ್ಆರ್ಟಿಸಿ, ಬಿಎಂಟಿಸಿ ಸಾರಿಗೆ ಇಲಾಖೆಯ ಚಾಲಕ ನಿರ್ವಾಹಕರಿಗೆ ಸಾರಿಗೆ ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುತ್ತಾ ಚಾಲಕನೋರ್ವ ಎತ್ತಿನ ಬಂಡಿಗೆ ಡಿಕ್ಕಿಯೊಡೆದ ಪರಿಣಾಮ ರೈತ ಗಂಭೀರ ಗಾಯಗೊಂಡಿದ್ದು, ಎರಡು ಹಸುಗಳು ಸಾವನ್ನಪಿದ್ದವು. ಈ ಘಟನೆ ನಂತರ ಎಚ್ಚೆತ್ತ ಸಾರಿಗೆ ಸಚಿವರು ಇದಕ್ಕೆ ಕಡಿವಾಣ ಹಾಕಲು ಖಡಕ್ ನಿರ್ಧಾರ ಮಾಡಿದ್ದಾರೆ. ಯಾರೇ ರೀಲ್ಸ್ ಮಾಡಿದ್ರೂ ಅವರನ್ನ ಕೂಡಲೇ ಸಸ್ಪೆಂಡ್ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.