ಜೋಗಿ ಪ್ರೇಮ್ ನಿರ್ದೇಶನ  ಕೆಡಿ ಆಡಿಯೋ 17.70 ಕೋಟಿಗೆ ! 

Ravi Talawar
ಜೋಗಿ ಪ್ರೇಮ್ ನಿರ್ದೇಶನ  ಕೆಡಿ ಆಡಿಯೋ 17.70 ಕೋಟಿಗೆ ! 
WhatsApp Group Join Now
Telegram Group Join Now
     ಈ ವರ್ಷ ಧ್ರುವ  ಸರ್ಜಾ ಅಭಿನಯದ ಎರಡು ಬಹು ನಿರೀಕ್ಷಿತ ಚಿತ್ರಗಳು ರಿಲೀಸಾಗುವುದು ಕನ್ ಫರ್ಮ್ ಆಗಿದೆ. ಅದರಲ್ಲಿ ಜೋಗಿ‌ ಪ್ರೇಮ್  ನಿರ್ದೇಶನದ ‘ಕೆಡಿ’ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಕಾಣಲಿದೆ ಎಂದು  ನಿರ್ದೇಶಕ ಪ್ರೇಮ್ ಅವರೇ ಪ್ರಕಟಿಸಿದ್ದಾರೆ.
     ಅತಿದೊಡ್ಡ ತಾರಾಗಣ,  ಅದ್ದೂರಿ ಮೇಕಿಂಗ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ  ‘ಕೆಡಿ’  ಚಿತ್ರದ ಆಡಿಯೋ ಹಕ್ಕು ಕೂಡ ಆನಂದ್ ಆಡಿಯೋ ಸಂಸ್ಥೆಗೆ ಸೇಲಾಗಿದೆ. ಇದುವರೆಗೂ ತಮ್ಮ ಚಿತ್ರದ  ಆಡಿಯೋ ಹಕ್ಕು ಎಷ್ಟು ಮೊತ್ತಕ್ಕೆ ಹೋಗಿದೆ ಎಂದು ಯಾವೊಬ್ಬ ನಿರ್ಮಾಪಕರೂ ಹೇಳಿಕೊಂಡಿದ್ದಿಲ್ಲ.
ಆದರೆ ಇದೇ ಮೊದಲಬಾರಿಗೆ ನಿರ್ದೇಶಕ ಪ್ರೇಮ್, ‘ಕೆಡಿ  ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು 17.70 ಕೋಟಿ ರೂ.ಗಳಿಗೆ ತಗೊಂಡಿದ್ದಾರೆ” ಎಂದು ಹೇಳಿದ್ದಾರೆ.
     ‘ಕೆಡಿ’ ಚಿತ್ರದ  ವಿಶೇಷ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ  ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ, ವೇದಿಕೆಯಲ್ಲಿ ಚಿತ್ರದ ನಿರ್ದೇಶಕ, ನಾಯಕ, ಸಂಗೀತ ನಿರ್ದೇಶಕ ಸೇರಿ ಎಲ್ಲರೂ ವಿಂಟೇಜ್ ಡ್ರೆಸ್‌ನಲ್ಲಿದ್ದುದು ವಿಶೇಷವಾಗಿತ್ತು.
ಏಕೆಂದರೆ ಈ ಚಿತ್ರದ ಕಥೆ ನಡೆಯುವುದು ಎಪ್ಪತ್ತು, ಎಂಭತ್ತರ ದಶಕದಲ್ಲಿ.  ನಿರ್ದೇಶಕ ಪ್ರೇಮ್ “ಚಿತ್ರದ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗಿಲ್ಲ, ಇನ್ನು ಈ  ಚಿತ್ರದ ಹಾಡುಗಳಿಗೆ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲಬಾರಿಗೆ 256 ಪೀಸ್  ಆರ್ಕೆಸ್ಟ್ರಾ   ಬಳಸಲಾಗಿದೆ,  ಶಾರುಖ್‌ಖಾನ್ ಅಭಿನಯದ ಜವಾನ್ ಚಿತ್ರಕ್ಕೆ ೧೮೦ ಪೀಸ್ ಆರ್ಕೆಸ್ಟ್ರಾ ಬಳಸಲಾಗಿತ್ತು,
ಇದೀಗ  ಆ  ದಾಖಲೆಯನ್ನು ಕೆಡಿ ಸಿನಿಮಾ ಮುರಿದಿದೆ.  ಕೆಡಿ ಚಿತ್ರಕ್ಕೆ ಈವರೆಗೆ 150 ದಿನಗಳ ಚಿತ್ರೀಕರಣ ನಡೆಸಿದ್ದೇವೆ. ಇನ್ನೊಂದು ವಾರದ ಟಾಕಿ ಪೋರ್ಷನ್ ಹಾಗೂ  3 ಹಾಡುಗಳನ್ನು ಶೂಟ್ ಮಾಡಿದರೆ ಚಿತ್ರೀಕರಣ ಮುಗಿದಂತೆ, ನೈಜಘಟನೆ ಆಧಾರಿತ ಈ ಚಿತ್ರಕ್ಕೆ ಇಪ್ಪತ್ತು  ಎಕರೆ ಜಾಗದಲ್ಲಿ ಸೆಟ್ ಹಾಕಿದ್ದೇವೆ, ಚಿತ್ರದಲ್ಲಿ ಆರು ಹಾಡುಗಳಿದ್ದು,  ಆರು ಜನ ಕೊರಿಯಾಗ್ರಾಫರ‍್ಸ್ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿ ನಂತರ ಕೆಡಿ ಚಿತ್ರವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರುವುದಾಗಿ ತಿಳಿಸಿದರು.
ಅಲ್ಲದೆ  ಆಗಸ್ಟ್ 16ರ ವರಮಹಾಲಕ್ಷ್ಮಿ ಹಬ್ಬದಂದು ಮುಂಬೈನಲ್ಲಿ ಚಿತ್ರದ ಟೀಸರ್ ಹಾಗೂ 24ಕ್ಕೆ ಚಿತ್ರದ ಮೊದಲ ಹಾಡನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿರುವುದಾಗಿಯೂ ಅವರು ತಿಳಿಸಿದರು.
      “ನನ್ನ ವಿಐಪಿಗಳಿಗೆ ನಮಸ್ಕಾರ” ಎಂದು ಮಾತು ಆರಂಭಿಸಿದ ನಾಯಕ ಧ್ರುವ “ಮೊದಲು ನಾನು ಕೆವಿಎನ್ ಜೊತೆ ಸೈನ್ ಮಾಡಿದಾಗ  ಯಾರಕೈಲಿ ನಿರ್ದೇಶನ  ಮಾಡಿಸುವುದು ಎಂಬ ಪ್ರಶ್ನೆ ಬಂದಾಗ ಫಸ್ಟ್  ನನ್ನ ಬಾಯಲ್ಲಿ ಬಂದದ್ದು ಪ್ರೇಮ್ ಹೆಸರು, ಅವರು ಸಿನಿಮಾ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ, ನಾವು ಸೆಟ್‌ಗೆ ಹೋದಾಗ ಅವರು ಟೀಚರ್ ಥರ ಇರ್ತಾರೆ, ಅವರೇ ಆಕ್ಟ್ ಮಾಡಿ ತೋರಿಸುತ್ತಾರೆ, ಇದು 1970-75ರಲ್ಲಿ  ಬೆಂಗಳೂರಲ್ಲಿ ನಡೆಯುವ ಕಥೆ, ಇಡೀ ಬೆಂಗಳೂರನ್ನೇ ಸೆಟ್ ಹಾಕಿ ಅವರು, ಇನ್ನೊಂದು ಬೆಂಗಳೂರು ಥರ ಮಾಡಿಬಿಟ್ಟಿದ್ರು, ಚಿತ್ರದ ಬಗ್ಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ವೈಬ್ಸ್ ಬರ‍್ತಾ ಇದೆ” ಎಂದು ಹೇಳಿದರು,
     ಕಾರ್ಯಕಾರಿ ನಿರ್ಮಾಪಕರಾದ ಸುಪ್ರೀತ್ “ಈ ಸಿನಿಮಾ ಸ್ಟಾರ್ಟ್ ಆಗಲು ಕಾರಣ ಪ್ರೇಮ್, ನಾನು ವೆಂಕಟ್ ಅವರ ಬಳಿ ಚರ್ಚೆ ಮಾಡುತ್ತ `ಧ್ರುವ ಸರ್ಜಾ  ಸಿನಿಮಾನ  ಯಾರಕೈಲಿ ಡೈರೆಕ್ಟ್ ಮಾಡಿಸೋದು ಎಂಬ ಪ್ರಶ್ನೆ ಬಂದಾಗ  ಫಸ್ಟ್ ನೆನಪಾದದ್ದು ಪ್ರೇಮ್. ಜನ್ಯ ಅವರು ನಮ್ಮ ಸಿನಿಮಾಗೆ ಕೊಟ್ಟಷ್ಟು ಟೈಮನ್ನು ಯಾವ ಚಿತ್ರಕ್ಕೂ ಕೊಟ್ಟಿಲ್ಲ” ಎಂದು ಹೇಳಿದರು. ಅರ್ಜುನ್ ಜನ್ಯ ಮಾತನಾಡಿ “ನನ್ನ ಲೈಫ್ ನಲ್ಲೇ ದ ಬೆಸ್ಟ್ ಸಿನಿಮಾ ಇದು. ಭಾರತದ ಎಲ್ಲ ಬೆಸ್ಟ್ ಮ್ಯುಸಿಶಿಯನ್ಸ್ ಪರ್ ಫಾರ್ಮ್ ಮಾಡಿದ್ದಾರೆ. ಈ ಥರದ ಮ್ಯೂಸಿಕ್ ತೆಗೆಸೋದು ಪ್ರೇಮ್  ಕೈಲಷ್ಟೇ ಸಾಧ್ಯ” ಎಂದು ಹೇಳಿದರು,
     ‘ಕೆಡಿ’ ಚಿತ್ರಕ್ಕೆ ಪ್ರೇಮ್ ಅವರೇ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್‌ಅಡಿ ನಿರ್ಮಾಣವಾಗಿರೋ ಈ  ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿಯಂಥ ದಿಗ್ಗಜ ಕಲಾವಿದರು  ನಟಿಸಿದ್ದಾರೆ.  ವಿಲಿಯಂ ಡೇವಿಡ್ ಅವರ  ಛಾಯಾಗ್ರಹಣವಿದೆ.
WhatsApp Group Join Now
Telegram Group Join Now
Share This Article