ಸರ್ಕಾರಿ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ಸೌಲಭ್ಯ: ಸಚಿವ ದಿನೇಶ್ ಗುಂಡೂರಾವ್

Ravi Talawar
ಸರ್ಕಾರಿ ಆಸ್ಪತ್ರೆಗಳಲ್ಲೂ  ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ಸೌಲಭ್ಯ: ಸಚಿವ ದಿನೇಶ್ ಗುಂಡೂರಾವ್
WhatsApp Group Join Now
Telegram Group Join Now

ಬೆಂಗಳೂರು: ಬಡ, ಮಧ್ಯಮ ವರ್ಗದ ಜನರಿಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಇನ್ನು ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇದಕ್ಕೆ ಚಾಲನೆ ನೀಡಲಿದ್ದಾರೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾನುವಾರ ಹೇಳಿದರು.

ಸ್ಪರ್ಶ್ ಆಸ್ಪತ್ರೆ ಸಮೂಹ ಸಂಸ್ಥೆಯು ನಗರದ ಹೆಣ್ಣೂರು ರಸ್ತೆಯಲ್ಲಿ ನೂತನವಾಗಿ ಆರಂಭಿಸಿದ ‘ವಿಶೇಷ ಚಿಕಿತ್ಸಾ ಸೌಲಭ್ಯಗಳ 300 ಹಾಸಿಗೆಯ ಸ್ಪರ್ಶ್ ಆಸ್ಪತ್ರೆ ಶಾಖೆ ಉದ್ಘಾಟಿಸಿ ಸಚಿವರು ಮಾತನಾಡಿದರು.

ಮೇ 23 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಚಾಲನೆ ನೀಡಲಿದ್ದು, ನಂತರ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸರ್ಕಾರ ಡೇ ಕೇರ್ ಕಿಮೊಥೆರಪಿ ಕೇಂದ್ರಗಳನ್ನು ತೆರೆಯಲಿದೆ. ಕ್ಯಾನ್ಸರ್ ಚಿಕಿತ್ಸೆಯನ್ನು ಜನರಿಗೆ ಹತ್ತಿರ ತರುವ ಗುರಿಯನ್ನು ಈ ಕೇಂದ್ರಗಳು ಹೊಂದಿವೆ ಎಂದು ಹೇಳಿದರು.

ಕ್ಯಾನ್ಸರ್‌ನಿಂದ ಬಳಲುವ ರೋಗಿಗಳು ತಮ್ಮ ಚಿಕಿತ್ಸೆಗೆ ಲಕ್ಷಾಂತರ ರು. ವ್ಯಯಿಸುವುದು ಅನಿವಾರ್ಯವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹೆಚ್ಚಿನ ಸೌಕರ್ಯ ಇರುವುದರಿಂದ ಬಡವರು ಸಹ ಅಲ್ಲಿಗೆ ತೆರಳುತ್ತಾರೆ ಹಾಗೂ ಬಡರೋಗಿಗಳು ಕಿಮೋಥೆರಪಿಗೆ ಸಾವಿರಾರು ರುಪಾಯಿ ವ್ಯಯಿಸುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲೂ ಈ ಸೌಲಭ್ಯ ಒದಗಿಸಿದರೆ ಸಾಕಷ್ಟು ಜನರು ಬರುವಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಿಮೋಥೆರಪಿ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಶೀಘ್ರವೇ ಈ ಸೇವೆಗೆ ಚಾಲನೆ ಸಿಗಲಿದೆ ಎಂದರು.

ಇದೇ ವೇಳೆ ಸಂಶೋಧನೆಯ ಅಗತ್ಯವನ್ನ ಒತ್ತಿ ಹೇಳಿದ ಸಚಿವರು, ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡಲು ಖಾಸಗಿ ಆಸ್ಪತ್ರೆಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮತ್ತು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article