ಬೆಂಗಳೂರು: ಪ್ರಜ್ವಲ್ ಅವರನ್ನು ವಿದೇಶಕ್ಕೆ ದೇವೇಗೌಡರೇ ಕಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿರುವ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಅವರು; ವಿದೇಶಕ್ಕೆ ನಿಮ್ಮ ಮಗನನ್ನು ಸಾಯಲಿ ಅಂತಲೇ ಕಳಿಸಿದಿರಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ತಮ್ಮ ನಿವಾಸದ ಬಳಿ ಸಿಎಂ ಹೇಳಿಕೆ ಕುರಿತು ಮಾತನಾಡಿದ ಕುಮಾರಸ್ವಾಮಿ, ಯಾರಿಗೆ ಆಗಲಿ ನೋವು ನೋವೇ. ನಿಮ್ಮ ಕುಟುಂಬದಲ್ಲಿ ಒಂದು ಘಟನೆ ನಡೆದಿದೆ. ಆಗ ನಿಮ್ಮ ಮಗನನ್ನು ನೀವೇ ಕಳಿಸಿದಿರಾ? ಅವರ ಸಾವಿಗೆ ನೀವೇ ಕಾರಣರಾ? ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ರಾಜತಾಂತ್ರಿಕ ಪಾಸ್ ಪೋರ್ಟ್ ಬಗ್ಗೆ ಇವರೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ಇವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ. ಈಗ ಪ್ರಜ್ವಲ್ ಗೆ ವಾಪಸ್ ಕರೆದುಕೊಂಡು ಬರಲು ಪತ್ರ ಬರೆದಿದ್ದಾರೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಬೇಕು ಎಂದು ಕೇಳಿದ್ದಾರೆ. ತಕ್ಷಣಕ್ಕೆ ಅದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇದೆಲ್ಲಾ ಪ್ರಕ್ರಿಯೆ ಸಾಕಷ್ಟು ದಿನ ಆಗಬಹುದು ಎನ್ನುವ ಕಾರಣಕ್ಕೆ ತಕ್ಷಣ ವಾಪಸ್ ಬಂದು ತನಿಖೆಗೆ ಹಾಜರಾಗು ಎಂದು ಪ್ರಜ್ವಲ್ ಗೆ ಸಂದೇಶ ಕೊಟ್ಟಿದ್ದೇನೆ. ದೇವೇಗೌಡರು ಕೊನೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಮಾಧ್ಯಮ ಹೇಳಿಕೆ ಮೂಲಕ ದೇವೇಗೌಡರು ನೀಡಿದ ಎಚ್ಚರಿಕೆ ಬಗ್ಗೆ ಮುಖ್ಯಮಂತ್ರಿಗಳು ಹಗುರವಾಗಿ ಮಾತಮಾಡುತ್ತಿದ್ದಾರೆ. ಎಷ್ಟು ವರ್ಷ ಇವರು ದೇವೆಗೌಡರ ಜತೆ ಕೆಲಸ ಮಾಡಿದ್ದಾರೆ? ಅವರು ಯಾವ ರೀತಿ ರಾಜಕಾರಣ ಮಾಡಿದ್ದಾರೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಅದೇ ನಿಮ್ಮ ಕುಟುಂಬಕ್ಕೆ ಅನ್ವಯಿಸಿಕೊಂಡು ನೋಡಿ, ಆ ನೋವು ಏನು ಎನ್ನುವುದು ಗೊತ್ತಾಗುತ್ತದೆ. ನಿಮಗೆ ನಾಚಿಕೆ ಆಗೋದಿಲ್ಲವೇ? ತೆನಿಖೆಯ ದಾರಿ ತಪ್ಪಿಸುವ ಕೆಲಸ ನಾನು ಮಾಡಿದೆನಾ? ಎಂದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಕೆಂಡಾಮಂಡಲರಾದರು.
ಇದೊಂದು ರಾಜಕೀಯ ಪಕ್ಷವಾ? ಇವರಿಗೆ ಗೌರವ ಇದೆಯಾ? ಮಾನ ಮಾರ್ಯಾದೆ ಇದೆಯಾ? ಅದೇ ನಿಮ್ಮ ಡಿ.ಕೆ.ಶಿವಕುಮಾರ್, ಅದೇ ಸಿಡಿ ಶಿವು ಮಾಡಿದ್ದು ಗೊತ್ತಿಲ್ಲವೇ? ಆ ವ್ಯಕ್ತಿಯನ್ನು ಶಿವಕುಮಾರ್ ಎನ್ನುವುದು ಉಪಯೋಗಕ್ಕೆ ಬರೋದಿಲ್ಲ. ಅವರನ್ನು ಸಿಡಿ ಶಿವು ಅಂತಲೇ ಕರೆಯಬೇಕು. ಯಾಕಪ್ಪ ಸೀಡಿ ಶಿವು ಬ್ರೋಕರ್ ಶಿವರಾಮೇಗೌಡ ಜತೆ ಮಾತನಾಡಿದೆ? ಎಂದು ಡಿಸಿಎಂ ಡಿಕೆಶಿಯನ್ನು ನೇರವಾಗಿ ಪ್ರಶ್ನಿಸಿದರು.