ಪ್ರತಿ ವರ್ಷ ನವೆಂಬರ್ ೧೪ನ್ನು ವಿಶ್ವ ಮಧುಮೇಹ ದಿನ ವನ್ನಾಗಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ದಿನ ಪ್ರಸಿದ್ಧ ವಿಜ್ಞಾನಿ ಸರ್ ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನವಾಗಿದ್ದು ಅವರು ಇನ್ಸುಲಿನ್ ಅನ್ನು ಸಂಶೋಧಿಸಿದ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಅಂತರಾಷ್ಟ್ರೀಯ ಮಧುಮೇಹ ಒಕ್ಕೂಟ (ಐ.ಡಿ.ಎಫ್) ಪ್ರಕಟಿಸಿರುವ ವಿಶ್ವ ಮಧುಮೇಹ ದಿನದ ಈ ವರ್ಷದ ಘೋಷಣಾ ವಾಕ್ಯ ಮಧುಮೇಹ ಮತ್ತು ಯೋಗಕ್ಷೇಮ ವಾಗಿದೆ. ಈ ಅಭಿಯಾನವು ದೇಹಾರೋಗ್ಯ, ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ ಮತ್ತು ಬೆಂಬಲಕಾರಿ ಪರಿಸರಗಳ ಮಹತ್ವ ಸೇರಿದಂತೆ ಸಮಗ್ರ ದೃಷ್ಟಿಕೋನದ ಮಧುಮೇಹ ನಿರ್ವಹಣೆಯ ಪ್ರಾಮುಖ್ಯತೆಯನ್ನು ಹೇಳುತ್ತದೆ.
ಬರುವ ನವೆಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಲ್ಲಿ ಮಧುಮೇಹ ಕುರಿತಾದ ಅರಿವು ಮತ್ತು ಜಾಗೃತಿಯನ್ನು ಮೂಡಿಸುವ ನಿಮಿತ್ಯ ಈ ನನ್ನ ಲೇಖನ.
ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಆರೋಗ್ಯದಿಂದ ಇರಬೇಕೆಂದರೆ ಕೆಲಸ ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಇರಬೇಕು ಹೆಚ್ಚು ಕೆಲಸದ ಒತ್ತಡದಿಂದ ದೇಹ ಮತ್ತು ಮನಸ್ಸು ದುರ್ಬಲವಾಗಬಹುದು.
ನಗರ ಜೀವನದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ವಾಹನ ಬಳಕೆ, ಕಚೇರಿ ಕೆಲಸ ಮತ್ತು ವ್ಯಾಯಾಮದ ಕೊರತೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ. ಇದು ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲದೆ ಅಮತೋಲನ ಆಹಾರ ಕ್ರಮವೇ ಮಧುಮೇಹ ಹೆಚ್ಚಾಗುವ ಪ್ರಮುಖ ಕಾರಣವೆನ್ನಬಹುದು.
ಇತ್ತೀಚಿನ ದಿನಗಳಲ್ಲಿ ಮಧುಮೇಹ ಎನ್ನುವ ರೋಗವು ಹಿರಿಯರಿಗಷ್ಟೇ ಸೀಮಿತವುಲ್ಲದೆ ಯುವಜನರಲ್ಲಿಯೂ ವೇಗವಾಗಿ ಹೆಚ್ಚಾಗುತ್ತಿದ್ದು, ೨೦ ರಿಂದ ೪೦ ವರ್ಷದೊಳಗಿನ ಯುವಕರಲ್ಲಿಯೂ ಇದು ಸಾಮಾನ್ಯವಾಗಿ ಕಾಣಿಸುತ್ತಿದೆ. ಈ ಬದಲಾವಣೆಯ ಪ್ರಮುಖ ಕಾರಣ ಆಧುನಿಕ ಜೀವನ ಶೈಲಿ ಎಂದರೆ ತಪ್ಪಾಗಲಾರದು. ಕಾರಣ ಜಂಕ್ ಫುಡ್, ಸಕ್ಕರೆಯುತ ಪಾನಿಯಗಳು ಮತ್ತು ಅತಿಯಾಗಿ ಪ್ರಾಸೆಸ್ಟ ಆಹಾರ ಸೇವನೆ, ಶಾರೀರಿಕ ಚಟುವಟಿಕೆಗಳ ಕೊರತೆ ಗಂಟೆಗಟ್ಟಲೆ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ, ಒತ್ತಡ ಮತ್ತು ನಿದ್ರೆಯ ಕೊರತೆ, ಯುವಕರಲ್ಲಿ ಹೆಚ್ಚುತ್ತಿರುವ ಅತಿಯಾದ ತೂಕ ಪ್ರಮುಖ ಕಾರಣ , ಕುಟುಂಬದಲ್ಲಿ ಮಧುಮೇಹದ ಇತಿಹಾಸ ಇದ್ದರೆ ಅಪಾಯ ಹೆಚ್ಚಿರುತ್ತದೆ.
ಒಮ್ಮೆ ಮಧುಮೇಹ ದೇಹದಲ್ಲಿ ಮನೆ ಮಾಡಿದರೆ ಅದನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ, ಆದರೆ ನಿಯಂತ್ರಣದಲ್ಲಿಡಬಹುದು. ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳುವದರಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು.
ಆರೋಗ್ಯವೇ ಭಾಗ್ಯ ಎಂಬುದು ಬಹಳ ಗಂಭೀರವಾದ ಹಾಗೂ ಸಾರ್ಥಕವಾದ ನುಡಿಗಟ್ಟು. ಮಾನವನಿಗೆ ಸಂಪತ್ತು ವಿಧ್ಯೆ, ಸ್ಥಾನಮಾನ ಎಲ್ಲವೂ ಆರೋಗ್ಯ ಇಲ್ಲದಿದ್ದರೆ ಅವುಗಳೆಲ್ಲ ವ್ಯರ್ಥ. ದೇಹ ಮತ್ತು ಮನಸ್ಸು ಆರೋಗ್ಯವಾಗಿದ್ದಾಗ ಮಾತ್ರ ಜೀವನ ಸುಖಕರವಾಗಿರುತ್ತದೆ. ಆದ್ದರಿಂದ ನಾವು ದಿನನಿತ್ಯ ಆರೋಗ್ಯದ ಕಡೆ ಗಮನಕೊಡಬೇಕು. ಸರಿಯಾದ ಆಹಾರ, ವ್ಯಾಯಾಮ, ವಿಶ್ರಾಂತಿ ಮತ್ತು ಮನಶಾಂತಿ ಇರಬೇಕು.
ಬಹಳ ಜನರಿಗೆ ಮಧುಮೇಹದ ಬಗ್ಗೆ ಸಂಪೂರ್ಣ ಅರಿವು ಇಲ್ಲ. ನಿಯಮಿತ ತಪಾಸಣೆ ಆಹಾರ ನಿಯಂತ್ರಣ ಮತ್ತು ಔಷಧಿ ಪಾಲನೆಗೆ ನಿರ್ಲಕ್ಷದಿಂದ ರೋಗ ತೀವ್ರಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಾನು ವೈಧ್ಯಕೀಯ ಲೇಖನಕ್ಕಾಗಿ ಬೆಳಗಾವಿಯ ಜವಾಹರಲಾಲ್ ನೆಹರು ವೈಧ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಮತ್ತು ಮಧುಮೇಹ ವೈಧ್ಯ, ಡಾ.ಸಂಜಯ ಕಂಬಾರ, ಇವರನ್ನು ಭೆಟ್ಟಿಯಾಗಿ ಮಾಹಿತಿಯನ್ನು ಪಡೆದು ಅವರು ಸಂದರ್ಶನದಲ್ಲಿ ಹೇಳಿರುವದನ್ನು ಲೇಖನ ರೂಪದಲ್ಲಿ ಬರೆದಿರುವೆ.

ಡಾ.ಸಂಜಯ ಕಂಬಾರ
ಡಾ.ಸಂಜಯ ಕಂಬಾರ ಅವರು ಹೇಳುವಂತೆ ಭಾರತದಲ್ಲಿ ಮಧುಮೇಹ ವೇಗವಾಗಿ ಹರಡುತ್ತಿರುವ ಆರೋಗ್ಯ ಸವಾಲಾಗಿದೆ. ಸರಿಯಾದ ಜೀವನ ಶೈಲಿ, ವ್ಯಾಯಾಮ, ನಿಯಂತ್ರಿತ ಆಹಾರ ಮತ್ತು ವೈಧ್ಯಕೀಯ ಸಲಹೆ ಪಾಲನೆಯಿಂದ ಮಾತ್ರ ಈ ಸಮಸ್ಯಯನ್ನು ಕಡಿಮೆ ಮಾಡಬಹುದು ಎನ್ನುವ ಅವರು ಮಧುಮೇಹ ರೋಗಿಗಳಲ್ಲಿ ಆರೋಗ್ಯದ ಕುರಿತು ಅರಿವು ಅತ್ಯಂತ ಅಗತ್ಯವಾಗಿದ್ದು,
ಈ ನಿಟ್ಟಿನಲ್ಲಿ ಮಧುಮೇಹಿಗಳು :
೧. ಆಹಾರ ನಿಯಂತ್ರಣ : ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸರಿಯಾದ ಆಹಾರ ಪದ್ದತಿ ಬಹುಮುಖ್ಯ. ಸಕ್ಕರೆ ಮತ್ತು ಎಣ್ಣೆಯ ಅಂಶ ಕಡಿಮೆ ಇರುವ ಪೌಷ್ಟಿಕ ಆಹಾರ, ಹಣ್ಣು-ತರಕಾರಿ, ಹಾಗೂ ನಿತ್ಯ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅವಶ್ಯ ಇದರಿಂದ ದೇಹಕ್ಕೆ ಶಕ್ತಿ ನೀಡುತ್ತವೆ.
೨. ನಿತ್ಯ ವ್ಯಾಯಾಮ : ನಡಿಗೆ, ಯೋಗ ಅಥವಾ ಲಘು ವ್ಯಾಯಾಮದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಶರೀರ ಚುರುಕಾಗಿದ್ದು ಮನಸ್ಸು ಹಗುರವಾಗಿರಲು ಸಹಾಯವಾಗುತ್ತದೆ.
೩. ಔಷಧಿ ಮತ್ತು ತಪಾಸಣೆ : ವೈಧ್ಯರ ಸಲಹೆಯಂತೆ ನಿಗದಿತ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ನಿಯಮಿತವಾಗಿ ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಿಸುವುದು ಅಗತ್ಯ. ನಿರ್ಲಕ್ಷದಿಂದ ದೀರ್ಘಕಾಲಿನ ಸಮಸ್ಯಗಳು ಉಂಟಾಗಬಹುದು.
೪. ಮಾನಸಿಕ ಆರೋಗ್ಯ : ಒತ್ತಡ ಕಳವಳ ಇವು ಮಧುಮೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ಧ್ಯಾನ, ವಿಶ್ರಾಂತಿ ಹಾಗೂ ಸಂತೋಷಭರಿತ ಜೀವನಶೈಲಿ ಆರೋಗ್ಯ ಕಾಪಾಡಲು ಸಹಕಾರಿ.
೫. ಸಾಮಾಜಿಕ ಹಾಗೂ ಕೆಲಸ ಸ್ಥಳ : ಮಧುಮೇಹಿಗಳಿಗೆ ಪೂರಕ ಹಾಗೂ ಅನಕೂಲಕರವಾಗಿರಬೇಕು ಇದರಿಂದ ಅವರಲ್ಲಿ ಆತಂಕ, ಒತ್ತಡ, ಒಂಟಿತನ ಅನುಭವ ಆಗದಂತೆ ಸಮಗ್ರ ಆರೈಕೆ ಇರುವಂತೆ ನೋಡಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿರಬೇಕಿದೆ.
ಇವುಗಳನ್ನು ಅನುಸರಿಸಿದರೆ ಮಧುಮೇಹವೂ ನಿಯಂತ್ರಣದಲ್ಲಿದ್ದು ಆರೋಗ್ಯಕರ ಜೀವನವನ್ನು ನಡೆಸಬಹುದು. ಮಧುಮೇಹವು ಭಯ ಹುಟ್ಟಿಸುವ ರೋಗವಲ್ಲ ಸರಿಯಾದ ಆಹಾರ ವ್ಯಾಯಾಮ ಮತ್ತು ಔಷಧಿ ಕ್ರಮ ಪಾಲಿಸಿದರೆ ಇದು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬಹುದು. ಧೈರ್ಯದಿಂದ ಹಾಗೂ ಆತ್ಮವಿಶ್ವಾಸದಿಂದ ನಿಯಮಿತ ಶಿಸ್ತು ಪಾಲಿಸಿದರೆ ಆರೋಗ್ಯವಂತ ಜೀವನ ಸಾಧ್ಯ. ಮಧುಮೇಹ ಶತ್ರು ಅಲ್ಲ- ಅದು ಜೀವನಶೈಲಿಯ ಎಚ್ಚರಿಕೆಯ ಗಂಟೆ, ಭಯವಲ್ಲ ಶಿಸ್ತು ಮತ್ತು ಅರಿವು ಬೇಕು ಎನ್ನುತ್ತಾರೆ.
ಇಂದಿನ ವೈಧ್ಯಕೀಯ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣಗಳು ರೋಬೋಟಿಕ್ ಶಸ್ತ್ರ ಚಿಕಿತ್ಸೆ ಹಾಗೂ ಕೃತಕ ಬುದ್ಧಿಮತ್ತೆ ಬಳಕೆಯಿಂದ ರೋಗವನ್ನು ಸುಲಭ ಮತ್ತು ನಿಖರವಾಗಿ ಕಂಡುಹಿಡಿದು ಚಿಕಿತ್ಸೆ ನೀಡಬಹುದಾಗಿದೆ. ಅನೇಕ ಹೊಸ ಔಷಧಿಗಳು ಮತ್ತು ಇನ್ಸುಲಿನ್ ಮಾದರಿಗಳು ಮಧುಮೇಹ, ಹೃದಯ ರೋಗ ಕ್ಯಾನ್ಸರ್ ಮುಂತಾದ ಗಂಭೀರ ರೋಗಗಳಿಗೂ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತಿವೆ. ರೋಗವನ್ನು ತಡೆಗಟ್ಟುವ ಮತ್ತು ಬೇಗನೆ ಪತ್ತೆಹಚ್ಚುವ ತಂತ್ರಗಳು ಅಭಿವೃದ್ಧಿ ಹೊಂದಿವೆ ಇದರಿಂದ ರೋಗವನ್ನು ಪ್ರಾರಂಭದಲ್ಲೇ ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಇಂದಿನ ವೈಧ್ಯಕೀಯ ಕ್ಷೇತ್ರದ ಪ್ರಗತಿ ಮಾನವ ಜೀವ ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಈ ಸೌಲಭ್ಯಗಳನ್ನು ಸರಿಯಾಗಿ ಬಳಸಿದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.
ಮಧುಮೇಹ ಬಂದರೆ ಅದು ಜೀವನದ ಅಂತ್ಯವಲ್ಲ- ಅದು ಎಚ್ಚರಿಕೆಯ ಸಂಕೇತ ಶಿಸ್ತುಬದ್ಧ ಜೀವನದಿಂದ ದೀರ್ಘಕಾಲ ಆರೋಗ್ಯದಿಂದ ಇರಬಹುದೆಂದು ಡಾ.ಸಂಜಯ ಹೇಳುತ್ತಾರೆ.

ಅನಂತ ಪಪ್ಪು
ಮೋ: ೯೪೪೮೫೨೭೮೭೦

