ಬಳ್ಳಾರಿ,ಜೂ.24 ‘ಕ್ಷಯ’ ಎಂದು ಖಚಿತಪಟ್ಟಲ್ಲಿ ವೈದ್ಯರ ನಿರ್ದೇಶನದಂತೆ, 6 ತಿಂಗಳು ಉಚಿತ ಚಿಕಿತ್ಸೆ ಪಡೆದು ಗುಣಮುಖರಾಗುವ ಮೂಲಕ ಕ್ಷಯಮುಕ್ತ ಜಿಲ್ಲೆಗಾಗಿ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದರು.
ನಗರದ ಗುಗ್ಗರಹಟ್ಟಿ ವ್ಯಾಪ್ತಿಯಲ್ಲಿ ಕ್ಷೇತ್ರ ಭೇಟಿ ನಡೆಸಿ ಮಾತನಾಡಿದ ಅವರು, ‘ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್’ ಎಂಬ ರೋಗಾಣುನಿಂದ ಶತಮಾನಗಳಿಂದಲೂ ಸಮುದಾಯದಲ್ಲಿ ಇರುವ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಪಣತೊಡಬೇಕಿದೆ ಎಂದರು.
ಯಾರಿಗಾದರೂ ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ ಸೇರಿದಂತೆ ಲಕ್ಷಣಗಳಿದ್ದವರು ತಮ್ಮ ಗಮನಕ್ಕೆ ಬಂದಲ್ಲಿ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿ, ಬೇಗನೆ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು ಎಂದು ತಿಳಿಸಿದರು.
ಒಮ್ಮೆ ರೋಗ ಪತ್ತೆಯಾದರೆ ಅವರ ಚಿಕಿತ್ಸಾ ಅವಧಿ ಮುಗಿಯುವವರೆಗೆ ಮೇಲ್ವಿಚಾರಣೆ, ಅವರಿಗೆ ಬೆಂಬಲ ಹಾಗೂ ದಾನಿಗಳಿಂದ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಕ್ಷಯರೋಗ ಇದ್ದಲ್ಲಿ ಪಾಲಕರ ಮತ್ತು ಸುತ್ತಲಿನ ಮನೆಗಳ ಹಾಗೂ ಮಗುವಿಗೆ ಒಡನಾಟವಿರುವವರು ಪರೀಕ್ಷಿಸಿಕೊಳ್ಳಬೇಕು. ಮುಖ್ಯವಾಗಿ ಚಿಕಿತ್ಸೆ ನಿರ್ಲಕ್ಷಿಸಿದಲ್ಲಿ ರೋಗಿಯು ಬಹುಔಷಧಿ ರೋಗ ನಿರೋಧಕ ಕ್ಷಯರೋಗಿಯಾಗಿ ಎರಡು ವಷರ್Àಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೈದ್ಯ ವೃತ್ತಿ ಮಾಡುವವರು ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಕ್ಕೆ ಒಳಗಾಗುತ್ತಾರೆ. ಮುಂಜಾಗೃತೆ ವಹಿಸಿ ಯಾರಾದರೂ ಚಿಕಿತ್ಸೆ ಪಡೆಯಲು ನಿರಾಕರಿಸಿದರೆ ಸ್ಥಳೀಯ ಸಹಕಾರದೊಂದಿಗೆ ಚಿಕಿತ್ಸೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಮುಖ್ಯವಾಗಿ ಕ್ಷಯ ರೋಗವನ್ನು ಸಾಮಾನ್ಯ ಖಾಯಿಲೆ ಎಂಬ ರೀತಿಯಲ್ಲಿ ಕಾಣುವ ಮೂಲಕ ಕಳಂಕ-ತಾರತಮ್ಯ ತೊಲಗಿಸುವ ಪ್ರಯತ್ನ ಮಾಡಬೇಕು ಎಂದು ಡಿಹೆಚ್ಓ ವಿನಂತಿಸಿದರು.
ಈ ವೇಳೆ ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಾಗುಫ್ತಾ ಷಾಹೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಆರೋಗ್ಯ ಸಿಬ್ಬಂದಿಯರಾದ ನಿರಂಜನ, ಈರಯ್ಯ, ಉಮಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು.