ಬೈಲಹೊಂಗಲ: ಪ್ರತಿಯೊಬ್ಬನ ಮನಸ್ಸಿನಲ್ಲಿ ಧಾರ್ಮಿಕವಾದ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಕುಂದು ತರುತ್ತಿರುವ ಪ್ರಯತ್ನಗಳು ಖಂಡನೀಯ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್‌ಎಸ್.ಸಿದ್ದನಗೌಡರ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್.ಐ.ಟಿ. ತನಿಖೆ ಕುರಿತು ರಾಜ್ಯ ಸರ್ಕಾರವು ಕೂಡಲೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಈ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು. ಆದರೆ, ತನಿಖೆಯ ದಿಕ್ಕು ತಪ್ಪುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಮೊದಲು 13 ಸ್ಥಳಗಳ ಬಗ್ಗೆ ಹೇಳಿದ್ದ ಅನಾಮಿಕ ವ್ಯಕ್ತಿ ಈಗ 18 ಸ್ಥಳಗಳ ಬಗ್ಗೆ ಹೇಳುತ್ತಿದ್ದಾನೆ. ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಎಸ್‌ಐಟಿ ಬಳಸಿಕೊಳ್ಳುತ್ತಿದೆ ಎಂದು ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.
ಅನಾಮಿಕ ವ್ಯಕ್ತಿಯ ಹಿನ್ನೆಲೆ ಬಹಿರಂಗಪಡಿಸಬೇಕು.
ಯಾವುದೇ ಮಾಹಿತಿಯಿಲ್ಲದ ವ್ಯಕ್ತಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಆರೋಪ ಮಾಡುತ್ತಿರುವ ಅನಾಮಿಕ ವ್ಯಕ್ತಿ ಯಾರು? ಕಳೆದ 15 ವರ್ಷಗಳಿಂದ ಆತ ಎಲ್ಲಿದ್ದ ಮತ್ತು ಏನು ಮಾಡುತ್ತಿದ್ದ? ಅವನ ಹಿಂದಿರುವವರು ಯಾರು? ಈ ಎಲ್ಲಾ ಮಾಹಿತಿಯನ್ನು ರಾಜ್ಯ ಸರ್ಕಾರ ಹಾಗೂ ಎಸ್‌ಐಟಿ ಬಹಿರಂಗಪಡಿಸಬೇಕು.
ಧರ್ಮಸ್ಥಳ ಕೇವಲ ಧಾರ್ಮಿಕ ಕೇಂದ್ರವಲ್ಲ ಧರ್ಮಸ್ಥಳವು ಕೋಟ್ಯಂತರ ಭಕ್ತರಿಗೆ ಶ್ರದ್ಧಾ ಕೇಂದ್ರವಾಗಿದೆ. ಇದು ಕೇವಲ ಒಂದು ದೇವಸ್ಥಾನವಲ್ಲಒಂದೆ ಜಾತಿಗೆ ಸಂಬಂಧಿಸಿದ್ದಲ್ಲ. ಧಾರ್ಮಿಕ ಚಟುವಟಿಕೆಗಳ ಜೊತೆಗೆ, ಸಾವಿರಾರು ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನ, ವ್ಯಸನಮುಕ್ತಿ ಅಭಿಯಾನ ಹಾಗೂ ಸ್ವಸಹಾಯ ಸಂಘಗಳ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ನೀಡಿರುವದನ್ನು ಯಾರು ಮರೆಯಬಾರದು.
ಎಡಪಂಥೀಯರ ನಿದ್ದೆಗೆಡಿಸಿರುವ ಹೆಗ್ಗಡೆಯವರ ಕೆಲಸಗಳು ಕೆಲವರಿಗೆ ಹೊಟ್ಟೆ ಊರಿ ಇದೆ. ಅವರ ಜನಪರ ಕಾರ್ಯಗಳನ್ನು ಸಹಿಸಿಕೊಳ್ಳಲು ಆಗದೆ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಸನಾತನ ಸಂಸ್ಕೃತಿ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಈ ಷಡ್ಯಂತ್ರಗಳನ್ನು ಖಂಡಿಸಬೇಕು. ಸರ್ಕಾರ ಸರಿಯಾದ ನಿರ್ಧಾರ ತಗೆದುಕೊಳ್ಳದಿದ್ದರೆ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಕರೆ ನೀಡಿದ್ದಾರೆ..