* ಚಿಕ್ಕಬಳ್ಳಾಪುರದಲ್ಲಿ ಅಬ್ಬರದ ಪ್ರಚಾರ : ಶಾಸಕರಾದ ಪ್ರದೀಪ್ ಈಶ್ವರ್, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ, ಅನಸೂಯಮ್ಮ ಸಾಥ್
* ಬೀದಿ ಬದಿ ಹೋಟೆಲ್ ನಲ್ಲಿ ಉಪಹಾರ ಸೇವನೆ ; ಜನ ಸಾಮಾನ್ಯರ ಯೋಗ ಕ್ಷೇಮ ವಿಚಾರಿಸಿದ ಯುವ ನಾಯಕ
ಚಿಕ್ಕಬಳ್ಳಾಪುರ, ಏ, 24; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
ಶಾಸಕರಾದ ಪ್ರದೀಪ್ ಈಶ್ವರ್, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ, ಅನುಸೂಯಮ್ಮ ಅವರ ಜೊತೆಗೂಡಿ ಭರ್ಜರಿ ಮತಬೇಟೆಯಲ್ಲಿ ತೊಡಗಿದರು.
ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ, ಬಿಪಿಆರ್ ಬಡವಾಣೆ, ಸಿಎಸ್ ಐ ಆಸ್ಪತ್ರೆ, ಭುವನೇಶ್ವರಿ ವೃತ್ತ, ಬುದ್ಧ ಸರ್ಕಲ್, ಕಂದವಾರ ಹಾಗೂ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಮತಯಾಚಿಸಿದರು. ರೈತರು, ವರ್ತಕರು, ಜನ ಸಾಮಾನ್ಯರು, ಗ್ರಾಹಕರ ಜೊತೆ ಪ್ರಚಾರದಲ್ಲಿ ನಿರತರಾದರು.
ಅಂಬೇಡ್ಕರ್ ನಗರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬೀದಿ ಬದಿ ಹೋಟೆಲ್ ನಲ್ಲಿ ಕಾರ್ಮಿಕರು, ಜನ ಸಾಮಾನ್ಯರ ಜೊತೆ ಉಪಹಾರ ಸೇವಿಸಿ ಯೋಗ ಕ್ಷೇಮ ವಿಚಾರಿಸಿದರು. ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕಾರ್ಮಿಕರಲ್ಲಿ ವಿನಮ್ರವಾಗಿ ಮನವಿ ಮಾಡಿದರು. ರಕ್ಷಾ ರಾಮಯ್ಯ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು, ಕೈ ಕುಲುಕಲು ಯುವ ಸಮೂಹ, ಮಹಿಳೆಯರು, ಹಿರಿಯ ನಾಗರಿಕರು ಮುಗಿಬಿದ್ದರು.
ಈ ವೇಳೆ ಮಾತನಾಡಿದ ರಕ್ಷಾ ರಾಮಯ್ಯ, ನಮ್ಮ ದೇಶದ ಶಕ್ತಿ ಸಂವಿಧಾನ, ಪ್ರತಿಯೊಬ್ಬರ ರಕ್ಷಣೆ ಸಂವಿಧಾನದಲ್ಲೇ ಅಡಗಿದೆ. ಬಿಜೆಪಿ ಸಂವಿಧಾನ ವಿರೋಧಿಯಾಗಿದ್ದು, ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸಿ ನನಗೆ ಮತ ನೀಡಬೇಕು. ಸಂವಿಧಾನ ಬದಲಿಸಲು ಹುನ್ನಾರ ನಡೆಸಿರುವ ಬಿಜೆಪಿಯನ್ನು ಈ ಬಾರಿ ಸೋಲಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಪುಷ್ಪ ಕೃಷಿಕರಿಗೆ ಹೆಚ್ಚಿನ ಮಟ್ಟದ ಮನ್ನಣೆ ತಂದುಕೊಡಲು ಶ್ರಮಿಸುತ್ತೇನೆ. ಕಾಂಗ್ರೆಸ್ ಜನಪರವಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಗ್ಯಾರೆಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ದೈನದಿಂದ ಬದುಕಿನ ಬವಣೆಗಳನ್ನು ಕಾಂಗ್ರೆಸ್ ನಿವಾರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಿಂದ ಸುಗಮ ಜೀವನ ದೊರೆಯಲಿದೆ. ತಾವು ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದು, ನನ್ನನ್ನು ಹರಸಿ, ಆಶೀರ್ವದಿಸಿ ಗೆಲ್ಲಿಸುವಂತೆ ಕೋರಿದರು.