ಬೆಳಗಾವಿ: ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಿದ್ಯಾರ್ಥಿಗಳು ತಾವು ಕಲಿತ ತಾಂತ್ರಿಕ ಜ್ಞಾನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಪ್ರಾಯೋಗಿಕ ಕೌಶಲ, ಸಂಶೋಧನಾ ಮನೋಭಾವ ಹಾಗೂ ಹೊಸ ಆವಿಷ್ಕಾರಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಬೆಳಗಾವಿ ಸರಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ವಿ.ಕೆ. ಅಪ್ಪಾಜಿಗೋಳ ಹೇಳಿದರು.
ಸಮೀಪದ ನಿಡಸೋಸಿ ಹಿರಾಶುಗರ್ ತಾಂತ್ರಿಕ ಡಿಪ್ಲೋಮಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಟೆಕ್ಕೋವಿಷನ್-2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪ್ರಾಯೋಗಿಕ ತರಬೇತಿ, ನವೀನ ತಂತ್ರಜ್ಞಾನಗಳ ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತಾಂತ್ರಿಕ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಸಾಧನವಾಗಿದೆ. ಡಿಪ್ಲೋಮಾ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ, ಸೃಜನಶೀಲತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯ ರಾಜ್ಯಮಟ್ಟದ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ,”ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಸಿ. ಕಮತೆ ಮಾತನಾಡಿ, “ಜೀವನದಲ್ಲಿ ಉನ್ನತ ಶಿಕ್ಷಣ ಮತ್ತು ಶಿಸ್ತು ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಓದುತ್ತಿರುವ ದಿನಗಳಲ್ಲಿಯೇ ಗುರಿ ನಿಗದಿಪಡಿಸಿಕೊಂಡು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು. ತಾಂತ್ರಿಕ ನೈಪುಣ್ಯ, ಸಮಯಪಾಲನೆ, ಶಿಸ್ತು ಮತ್ತು ನಿರಂತರ ಅಭ್ಯಾಸ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾದ ಗುಣಗಳಾಗಿದ್ದು, ಅವನ್ನು ಉತ್ತಮ ಉದ್ಯೋಗಾವಕಾಶಗಳ ಜತೆಗೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ,” ಎಂದರು. ಅಳವಡಿಸಿಕೊಂಡರೆ
ಡಾ.ಬಿ.ವಿ. ಮದಿಗೊಂಡ ಸ್ವಾಗತಿಸಿದರು. ಪ್ರೊ. ಎಚ್.ಆರ್. ಜಿನಗೆ ಪರಿಚಯಿಸಿದರು. ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ಟೋಪನ್ನವರ, ನಾನಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು. ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಹೆಗ್ಗರ ಹಾಗೂ ಪ್ರತೀಕ್ಷಾ ಕಾಕೋಳಿ ನಿರೂಪಿಸಿದರು. ಪ್ರೊ. ಎಸ್.ಜಿ. ಹುದ್ದಾರ ವಂದಿಸಿದರು.


