ಚಿಕ್ಕಮಗಳೂರು,ಏಪ್ರಿಲ್ 17: ಬಿಡದಿ ಬಳಿಯ ರಸ್ತೆ ಬದಿಯ ಜಾಗ ಬರೆಸಿಕೊಳ್ಳಲು ಒಂಬತ್ತು ವರ್ಷದ ಹೆಣ್ಣು ಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಕೂಡಿ ಹಾಕಿದ್ದರಲ್ಲ ಅದಕ್ಕೆ ಅವರ ಕೈ ಇನ್ನಷ್ಟು ಬಲಪಡಿಸಬೇಕಾ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಮೂಡಿಗೆರೆ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಮತಯಾಚನೆ ಮಾಡಿದ ದೇವೇಗೌಡರು, ಒಕ್ಕಲಿಗ ಸಮುದಾಯ ಹೆಚ್ಚಿರುವ ಕಡೆ ನನ್ನ ಕೈ ಬಲಪಡಿಸಿ ಎಂದು ಹೇಳುತ್ತಿರುವ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಅವರ ಕೈಯನ್ನ ಏಕೆ ಬಲಪಡಿಸಬೇಕು? 9 ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿಕೊಂಡರಲ್ಲಾ ಅದಕ್ಕಾ ಎಂದು ಪ್ರಶ್ನಿಸಿದ್ದಾರೆ.
ಅಮೆರಿಕದಲ್ಲಿ ದುಡಿದು ತಂದಿದ್ದ ಹಣದಲ್ಲಿ ಉದ್ಯಮಿಯೊಬ್ಬರು ಬಿಡದಿ ಬಳಿ ಐ.ಟಿ ಕಂಪನಿ ಸ್ಥಾಪನೆ ಮಾಡಲು ಮುಂದಾಗಿದ್ದರು. ಅದರ ಹಿಂದಿನ ದಿನ ಇವರು ಸುಳ್ಳು ಕ್ರಯಪತ್ರ ಸಿದ್ಧಡಿಸಿದ್ದರು. ನನ್ನ ಬಳಿ ದಾಖಲೆ ಇದೆ ಎಂದು ಅದನ್ನು ಮುಂದಿಟ್ಟುಕೊಂಡು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಎರಡೂ ಕಡೆ ಮುಖಭಂಗವಾದ ಬಳಿಕ ಆ ವ್ಯಕ್ತಿಯ ಮಗಳನ್ನು ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದ ಪಕ್ಕದ ಮನೆಯಲ್ಲಿ ಒಂಬತ್ತು ದಿನ ಇಟ್ಟಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಧಮ್ಕಿ ಹಾಕಿದ್ದರು ಇಂಥವರ ಕೈ ಬಲಪಡಿಸಬೇಕಾ’ ಎಂದು ಮರುಪ್ರಶ್ನಿಸಿದರು.