ಬೆಳಗಾವಿ ಮಾ. 12 : ತಾಲೂಕಿನ ಮುತಗಾ ಗ್ರಾಮ ಪಂಚಾಯತ ಬಡಾವಣೆಗಳಾದ ಶ್ರೀರಾಮ ನಗರ ಕಾಲೋನಿ, ಸಾಯಿ ನಗರ, ಗೋಕುಲ ನಗರ, ವಿನಾಯಕ ನಗರ, ಬಸವ ನಗರಗಳ ನಾಗರೀಕರು ಮೂಲಭೂತ ಸೌಕ್ಯರಗಳಿಂದ ವಂಚಿತರಾಗಿದ್ದು ಮತಗಾ ಗ್ರಾಮ ಪಂಚಾಯತ ಈ ಪ್ರದೇಶಗಳನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ್ದು ಬಹಳಷ್ಟು ಸಲ ವಿನಂತಿಸಿದರೂ ಸಹ ಸ್ಪಂದಿಸಿರುವುದಿಲ್ಲವೆಂದು ಮುತಗಾ ಗ್ರಾಮ ಪಂಚಾಯತ ಸದಸ್ಯ ರವಿ ಕೊಟಬಾಗಿ ಆರೋಪಿಸಿದ್ದು, ನಾಗರೀಕರ ಆಶೋತ್ತರಗಳಿಗೆ ಸ್ಪಂದಿಸಿದೇ ಇದ್ದರೆ ಮುಂಬರುವ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯವೆಂದು ಹೇಳಿದ್ದಾರೆ.
ಗ್ರಾ.ಪಂ ಸದಸ್ಯ ರವಿ ಕೊಟಬಾಗಿ ನೇತೃತ್ವದಲ್ಲಿ ಬಡಾವಣೆಗಳ ಹಿರಿಯ ನಾಗರೀಕರಾದ ಆರ್. ಆರ್.ಪದಕಿ, ಭಿಮಪ್ಪ ನಬಾಪುರೆ, ರವಿ ಸಾಲಿಮಠ, ಆಕಾಶ್ ಶೆಟ್ಟಿ, ಶಿವು ಪಾಟೀಲ ಇವರುಗಳು ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪಿ.ಬಿ.ದುಡಗಂಟಿ ರವರಿಗೆ ಮನವಿ ಸಲ್ಲಿಸಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಳೆದ ಒಂದು ತಿಂಗಳಿನಿಂದ ನೀರು ಪೂರೈಕೆಯಾಗಿರುವುದಿಲ್ಲ ಮತ್ತು ಈ ಪ್ರದೇಶಗಳಲ್ಲಿ ನಿಯಮಿತವಾಗಿ ಕಸ ಸಂಗ್ರಹಣೆ ವಾಹನ ಬರದೇ ಇರುವುದಿರಂದ ಈ ಬಡಾವಣೆಗಳು ಸಂಪೂರ್ಣವಾಗಿ ಗಬ್ಬೆದ್ದು ನಾರುತ್ತಿವೆ. ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಈ ಪ್ರದೇಶದ ಜನರು ನೀರಿನ ಕೊರತೆಯಿಂದ ಕಂಗೆಟ್ಟಿದ್ದು ತಕ್ಷಣ ನಿಯಮಿತವಾಗಿ ಕುಡಿಯುವ ನೀರಿನ ಪೂರೈಕೆಯನ್ನು ಪ್ರಾರಂಬಿಸುವಂತೆ ಮತ್ತು ನಿಯಮಿತವಾಗಿ ಪಂಚಾಯತ್ ವಾಹನದ ಮೂಲಕ ಕಸ ಸಂಗ್ರಹಣೆ ವಿಲೇವಾರಿ ಮಾಡುವಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮನವಿಗೆ ಸ್ಪಂದಿಸಿದ ಜಿ.ಪಂ. ಮುಖ್ಯಲೆಕ್ಕಾಧಿಕಾರಿ ಪಿ.ಬಿ.ದುಡಗುಂಡಿ ಗ್ರಾ.ಪಂ. ಪಿ.ಡಿ.ಓ ಬಸವಂತ ಕಡೇಮನಿ ಮತ್ತು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ ರವರನ್ನು ಜಿ.ಪಂ ಗೆ ಕರೆಯಿಸಿ ಸಮಸ್ಯೆಗಳ ಬಗ್ಗೆ ವಿಚಾರಿಸಿ ತಕ್ಷಣ ಪರಿಹರಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಒಂದು ವಾರದೊಳಗೆ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.


