ಬೆಂಗಳೂರು, (ಏಪ್ರಿಲ್ 07): ಪರಪ್ಪನ ಅಗ್ರಹಾರ ಜೈಲು ಯಾವಾಗಲೂ ಒಂದಲ್ಲಾ ಒಂದು ರೀತಿ ಸುದ್ದಿಯಲ್ಲಿರುತ್ತೆ. ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ಕೊಟ್ಟ ಆರೋಪ ಹೊತಿದ್ದ ಈ ಜೈಲಿನ ವಿರುದ್ಧ ಈಗ ಹೊಸದೊಂದು ಆರೋಪ ಕೇಳಿ ಬಂದಿದೆ. ವಿಚಾರಣಾಧೀನ ಕೈದಿ ಬಳಿ ಲಂಚಕ್ಕೆ ಬೇಡಿಕೆ ಇಡುವುದರ ಜೊತೆಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹೌದು, 2024ರಲ್ಲಿ ಸೊಲದೇವನಹಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟ ಹಮೀದ್ ಎಂಬಾತ ಅಕ್ಟೋಬರ್ 4ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಆದ್ರೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಆತನ ಬಳಿ ಹಣ ಕೇಳುವುದರ ಜೊತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಜೈಲಿನಲ್ಲಿ ಹಮೀದ್ ಮೇಲೆ ಆಗಿರುವ ಹಲ್ಲೆ ಸಂಬಂಧ ಆತನ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಲಂಚಕ್ಕಾಗಿ ಬೇಡಿಕೆ, ಹಲ್ಲೆ; ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ವಿರುದ್ಧ ಆರೋಪ

ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ ದೂರಿನಲ್ಲೇನಿದೆ?: ಜೈಲಿನಲ್ಲಿ ಹಮೀದ್ ಮೇಲೆ ಆಗಿರುವ ಹಲ್ಲೆ ಸಂಬಂಧ ಆತನ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ನನ್ನ ಒಬ್ಬನೇ ಮಗನ ರಕ್ಷಿಸುವಂತೆ ಕೋರಿದ್ದಾರೆ. ಇದೇ ಏಪ್ರಿಲ್ 5ರ ರಾತ್ರಿ 6 ರಿಂದ 7 ಅಧಿಕಾರಿಗಳು ತನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ 30 ಸಾವಿರ ಹಣ ನೀಡುವಂತೆ ಕೇಳಿದ್ದಾರಂತೆ. ಹಣ ನೀಡದಿದ್ದರೇ ಮತ್ತಷ್ಟು ಸಮಸ್ಯೆ ಮಾಡುವುದಾಗಿ ಹೇಳಿದ್ದಾರಂತೆ.. ಗಾಯಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸದೇ, ಆಹಾರ ನೀಡದೇ ಹಾಗೂ ಮೂಲಸೌಕರ್ಯ ಸಹ ನೀಡದೇ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾಳೆ.