ಮುದ್ದೇಬಿಹಾಳ: ಸರ್ಕಾರಿ ಹಾಸ್ಟೇಲು, ಕಚೇರಿಗಳಲ್ಲಿ ಸಿಬ್ಬಂದಿಗಳು ತಮ್ಮ ಜನ್ಮದಿನಾಚರಣೆ, ವಾರ್ಷಿಕೋತ್ಸವ ಸೇರಿದಂತೆ ಯಾವುದೇ ವೈಯುಕ್ತಿಕ ಸಮಾರಂಭ ನಡೆಸಬಾರದು. ಇಂಥವುಗಳೇನಾದರೂ ಇದ್ದರೆ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಅಡಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಕಾನೂನು ಬಿಟ್ಟು ಆಚೆ ಈಚೆ ಸರಿದು ಏನಾದರೂ ಅನಪೇಕ್ಷಿತವಾದದ್ದನ್ನು ಮಾಡಿದರೆ ನೌಕರಿಗೆ ಕುತ್ತು ಬರುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ ಹೇಳಿದರು.
ಇಲ್ಲಿನ ತಂಗಡಗಿ ರಸ್ತೆ ಪಕ್ಕದ ಪಿಲೇಕೆಮ್ಮನಗರ ಬಡಾವಣೆಯಲ್ಲಿರುವ ಡಾ|ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಾಸ್ಟೇಲುಗಳಲ್ಲಿ ಸೇವೆ ಸಲ್ಲಿಸುವ ಹೊರಸಂಪನ್ಮೂಲ ಸಿಬ್ಬಂದಿಗಳ ಕುಂದು ಕೊರತೆ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನ, ಕಾನೂನು ಅರಿತುಕೊಂಡು ಅದರ ಪ್ರಕಾರ ಕೆಲಸ ಮಾಡಿ ಇಲಾಖೆಗೆ ಒಳ್ಳೇಯ ಹೆಸರು ತರುವುದು ಎಲ್ಲ ಸಿಬ್ಬಂದಿಗಳ ಕರ್ತವ್ಯವಾಗಿದೆ. ಮಕ್ಕಳು ಭವಿಷ್ಯದ ದೇಶ ಮುನ್ನಡೆಸುವ ನಾಗರಿಕರು. ಇವರಿಗೆ ಉತ್ತಮ ಸೇವೆ ಸಲ್ಲಿಸುವುದರಿಂದ ಇಲಾಖೆಗೆ ಒಳ್ಳೇಯ ಹೆಸರು ಬರುತ್ತದೆ. ಹಾಸ್ಟೇಲ್ ಪ್ರಾರಂಭದಿಂದ ಮುಕ್ತಾಯದವರೆಗೂ ಕೆಲಸ ಇರುತ್ತದೆ. ಆದರೆ ರಜೆಯ ಎರಡು ತಿಂಗಳ ಅವಧಿಯಲ್ಲಿ ಮಕ್ಕಳು ಇರುವುದಿಲ್ಲ. ಆಗ ಸಿಬ್ಬಂದಿ ಕುಡಿಯುವ ನೀರಿನ ಟ್ಯಾಂಕ್, ಶೌಚಾಲಯ ಸೇರಿದಂತೆ ಇಡೀ ಹಾಸ್ಟೇಲ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಹಾಸ್ಟೇಲ್ ಪ್ರಾರಂಭಗೊಂಡ ನಂತರ ಸಿಬ್ಬಂದಿ ತಾವೂ ಸ್ವಚ್ಛವಾಗಿದ್ದು ಮಕ್ಕಳಿಗೂ ಸ್ವಚ್ಛತೆಯ ಪಾಠ ಕಲಿಸಬೇಕು. ಹಳ್ಳಿಯಿಂದ ಬರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಹೊರ ಸಂಪನ್ಮೂಲ ಸಿಬ್ಬಂದಿಗೆ ಇಎಸ್‌ಐ, ಪಿಎಫ್, ಗುರ್ತಿನ ಕಾರ್ಡ, ವೇತನ ಸ್ಲಿಪ್ ಸೇರಿ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ತಮ್ಮ ಹೆಸರು, ಸೇವೆ ಸಲ್ಲಿಸುವ ಹಾಸ್ಟೇಲಿನ ಹೆಸರು ಸಮೇತ ಕಾಗದದಲ್ಲಿ ಮಾಹಿರಿ ಬರೆದು ಕೊಟ್ಟಲ್ಲಿ ಅದನ್ನು ಏಜನ್ಸಿಯವರ ಗಮನಕ್ಕೆ ತಂದು ಸರಿಪಡಿಸಲು ಸೂಚಿಸಲಾಗುತ್ತದೆ. ಸೂಚನೆಗೆ ಸ್ಪಂಧಿಸದಿದ್ದರೆ ಇಲಾಖೆಯ ಉಪನಿರ್ದೇಶಕರ ಗಮನಕ್ಕೆ ತಂದು ಜಿಲ್ಲಾಧಿಕಾರಿಯವರಿಗೆ ಮುಂದಿನ ಅಗತ್ಯ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುತ್ತದೆ. ಇಲಾಖೆಯ ಅಧಿಕಾರಿಗಳು ಇರುವುದು ಸಿಬ್ಬಂದಿಗೆ ನೆರವಾಗಲು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್, ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಅವರು ಮಾತನಾಡಿ, ಹೊರಗುತ್ತಿಗೆ ನೌಕರರ ಕುಂದುಕೊರತೆ ಆಲಿಸುವ ಸಭೆ ಏರ್ಪಡಿಸಿದ್ದು ಶ್ಲಾಘನೀಯ. ಈ ನೌಕರರಿಗೆ ೧೫-೨೦ ವರ್ಷಗಳಿಂದ ಕಡಿಮೆ ವೇತನ ಕೊಡಲಾಗುತ್ತಿದೆ. ಏಜನ್ಸಿಯವರು ಶೋಷಣೆ ನಡೆಸುತ್ತಿದ್ದಾರೆ. ಕನಿಷ್ಠ ವೇತನ ೩೧೦೦೦ ಕೊಡಬೇಕು, ಶೋಷಣೆ ತಡೆಯಬೇಕು, ಜೀತಪದ್ಧತಿ ತೋರಿಸುವ ಹೊರಗುತ್ತಿಗೆ ಸೇವೆ ರದ್ದುಪಡಿಸಬೇಕು, ಏಜನ್ಸಿ ರದ್ದುಗೊಳಿಸಿ ಬೀದರ್ ಮಾದರಿಯಲ್ಲಿ ಸೊಸೈಟಿ ಸ್ಥಾಪಿಸಿ ಅದರ ಮೂಲಕ ಸಂಬಳ ಕೊಡಬೇಕು ಎನ್ನುವ ಬೇಡಿಕೆಗಳನ್ನು ಕಾರ್ಮಿಕ ಸಚಿವರ ಗಮನಕ್ಕೆ ತರಲಾಗಿದ್ದು ಶೀಘ್ರ ಈಡೇರಿಸುವ ಭರವಸೆ ಇದೆ. ವಿಜಯಪುರದ ಹಿಂದಿನ ಜಿಲ್ಲಾಧಿಕಾರಿ ಭೂಬಾಲನ್ ಅವರು ಸೊಸೈಟಿ ರಚಿಸಿ ಅದರ ಮುಖಾಂತರ ನೌಕರರಿಗೆ ಸಂಬಳ ಕೊಡುವ ಭರವಸೆ ಈಡೇರಿಲ್ಲ. ವಾರಕ್ಕೊಂದು ರಜೆ, ನೌಕರರಿಗೆ ವರ್ಷಕ್ಕೆರಡು ಜೊತೆ ಸಮವಸ್ತ್ರ ಬೇಡಿಕೆ ಈಡೇರಿಸಲು ಮುಂದಿನ ಸಭೆಗೆ ಏಜನ್ಸಿ ಮುಖ್ಯಸ್ಥರನ್ನೇ ಕರೆಸಬೇಕು ಎಂದರು.
ಸಂಘದ ತಾಲುಕಾಧ್ಯಕ್ಷ ಮಲಕಪ್ಪ ಚಲವಾದಿ, ಹಿರಿಯ ವಾರ್ಡನ್ ಎಸ್.ಜಿ.ವಾಲಿಕಾರ, ಬಲಭೀಮ ನಾಯಕಮಕ್ಕಳ, ಗೌತಮ್ ಗಂಗೂರ, ಸಾಯಿನಾಥ ಸೆಕ್ಯೂರಿಟಿ ಏಜನ್ಸಿಯ ಜಿಲ್ಲಾ ಸಿಬ್ಬಂದಿ ಮಹಾಂತೇ ವೇದಿಕೆಯಲ್ಲಿದ್ದರು. ಸಭೆಯಲ್ಲಿ ನೌಕರರ ಕುಂದುಕೊರತೆ ಆಲಿಸಿ ಪರಿಹಾರ ಕ್ರಮಗಳ ಕುರಿತು ಚರ್ಚಿಸಲಾಯಿತು.
ಕೋಟ್:
ಸರ್ಕಾರಿ ಹಾಸ್ಟೇಲುಗಳಲ್ಲಿರುವ ಮಕ್ಕಳ ಸೇವೆ ಮಾಡುವುದು ದೇವರ ಸೇವೆಗೆ ಸಮನಾದದ್ದಾಗಿದೆ. ಈ ಸೇವೆ ಸ್ವೀಕಾರಾರ್ಹವಾದದ್ದು, ಸಂತೋಷ ಕೊಡುವಂಥದ್ದು. ಹಾಸ್ಟೇಲುಗಳಲ್ಲಿ ಕೆಲಸ ಮಾಡುವ ನೌಕರರು ಮೊದಲು ತಾವು ಸ್ವಚ್ಛವಾಗಿದ್ದು ಮಕ್ಕಳಿಗೆ ಸ್ವಚ್ಛತೆ ಕಲಿಸಿಕೊಡಬೇಕು.
-ಬಸಂತಿ ಮಠ, ಸಹಾಯಕ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ.