ಬೆಂಗಳೂರು, ಏಪ್ರಿಲ್ 11: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಷಯಾಂತರ ಮಾಡುವುದು ಬೇಡ. ಅವರು ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಉತ್ತರ ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ದೀಪಕ್ ತಿಮ್ಮಯ್ಯ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದರು.
ಯಡಿಯೂರಪ್ಪನವರು ಅಂದು ಯಾಕೆ ಕಣ್ಣೀರು ಹಾಕುವ ಪರಿಸ್ಥಿತಿ ಬಂತು? ಅದಕ್ಕೆ ಉತ್ತರಿಸಲಿ. ನಮಗೆ ರಾಹುಲ್ ಗಾಂಧಿ ಹೆಸರು ಹೇಳುವ ಧೈರ್ಯ ಇಲ್ಲ ಎನ್ನುತ್ತಾರಲ್ಲ, ಹಾಗಾದರೆ ಶಿವಮೊಗ್ಗಕ್ಕೆ ಬಂದಾಗ ಪ್ರಧಾನಿ ಮೋದಿ ಯಾಕೆ ಅಭ್ಯರ್ಥಿಗಳ ಹೆಸರು ಹೇಳಿ ಮತ ಯಾಚಿಸಿದರು? ಅವರಿಗೇ ಧೈರ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಓಟು ನೀಡುವುದು ಭಯೋತ್ಪಾದನೆಗೆ ಬೆಂಬಲ ನೀಡಿದಂತೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅದನ್ನು ಚುನಾವಣಾ ಆಯೋಗ ನೋಡಿಕೊಳ್ಳಲಿದೆ. ಮಾದರಿ ನೀತಿ ಸಮಯದ ಜಾರಿಯಲ್ಲಿ ಇರುವುದರಿಂದ ಅವರ ಹೇಳಿಕೆ ಬಗ್ಗೆ ಆಯೋಗ ಗಮನ ಹರಿಸಲಿದೆ ಎಂದರು.
ರಂಜಾನ್ ಹಬ್ಬದ ಶುಭಾಶಯ ಕೋರಿದ ಡಿಕೆ ಶಿವಕುಮಾರ್, ಹೊಸದಡಕು, ಯುಗಾದಿ ಆಗಿದೆ. ಇವತ್ತು ಒಳ್ಳೆಯ ಮುಹೂರ್ತ ಹುಡುಕಿದ್ದೇನೆ. ದೀಪಕ್ ತಿಮ್ಮಯ್ಯ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡೆ. ಒಳ್ಳೆಯ ಸಂದರ್ಭದಲ್ಲಿ ಒಳ್ಳೆ ಸಲಹೆಗಳನ್ನು ನೀಡಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಯಾರ ಯಾರ ಹಣೆಬರಹ ಏನೇನಿದೆಯೋ ಗೊತ್ತಿಲ್ಲ ಎಂದರು.