ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಮನೆ ಭೇಟಿಗೆ ನಿರ್ಧಾರ; ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿಗೆ ಪಣ: ಜಿಲ್ಲಾಧಿಕಾರಿ ದಿವ್ಯ ಪ್ರಭು

Ravi Talawar
ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಮನೆ ಭೇಟಿಗೆ ನಿರ್ಧಾರ; ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿಗೆ ಪಣ: ಜಿಲ್ಲಾಧಿಕಾರಿ ದಿವ್ಯ ಪ್ರಭು
WhatsApp Group Join Now
Telegram Group Join Now
ಧಾರವಾಡ :  ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆ ಹಾಗೂ ಕಲಿಕಾ ಗುಣಮಟ್ಟ ಹೆಚ್ಚಿಸಲು ಮಿಷನ್ ವಿದ್ಯಾಕಾಶಿ ಯೋಜನೆಯಡಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ದಾಖಲಾಗಿ, ಗೈರು ಹಾಜರು ಇರುವ ಮಕ್ಕಳ ಮನೆಗೆ ಭೇಟಿ ನೀಡಿ, ಮನ ಒಲಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯಕ್ಕಾಗಿ ಸಮುದಾಯದ ಸಹಭಾಗಿತ್ವವನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಬಯಸುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
 ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಶಾಲಾ ಹಾಜರಾತಿ ಹೆಚ್ಚಿಸುವ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಮರಳಿ ಶಾಲೆಗೆ ಸೇರಿಸುವಲ್ಲಿ ಸಮುದಾಯಗಳ ಸಹಭಾಗಿತ್ವ ಕಾರ್ಯಕ್ರಮದಡಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಮುಖರ ಮತ್ತು ವಿವಿಧ ಸರ್ಕಾರಿ ಸಮಿತಿಗಳ ಸದಸ್ಯರ, ಪ್ರತಿನಿಧಿಗಳ ಸಭೆ ಜರುಗಿಸಿ, ಮಾತನಾಡಿದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 37.08 ರಷ್ಟು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮತ್ತು ಶೇ. 35.24 ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಾಗೂ ಶೇ. 49.05 ರಷ್ಟು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಸಂಖ್ಯೆಗೆ ಹೋಲಿಸಿದಾಗ ಇದು ಬಹಳಷ್ಟು ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಶಾಲೆಗೆ ದಾಖಲಾಗಿರುವ ಪ್ರತಿ ಮಗು ಶಾಲೆಗೆ ಬಂದು ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮತ್ತು ನಿರಂತರವಾಗಿ ಶಾಲೆಯಲ್ಲಿದ್ದು, ಉತ್ತಮ ಶೈಕ್ಷಣಿಕ ಪ್ರಗತಿ ಹೊಂದಲು ಈ ಸಮುದಾಯಗಳ ಪ್ರಮುಖರ ಹಾಗೂ ಹಿರಿಯರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಪ್ರಸಕ್ತ ವರ್ಷದ 2024-25 ನೇ ಸಾಲಿಗೆ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ 1 ರಿಂದ 10 ನೇ ತರಗತಿಯವರೆಗೆ ಒಟ್ಟು 3,39,109 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಲ್ಲಿ 33,588 ಸಾಮಾನ್ಯ ವರ್ಗದ, 35,861 ಪರಿಶಿಷ್ಟ ಜಾತಿ, 17,977 ಪರಿಶಿಷ್ಟ ಪಂಗಡ ಮತ್ತು 2,51,683 ಹಿಂದುಳಿದ ವರ್ಗಗಳ ಹಾಗೂ 89,963 ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ 53,838 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಪ್ರತಿ ದಿನ ತಪ್ಪದೇ ಶಾಲೆಗೆ ಬರುವಂತೆ ಮತ್ತು ಪೂರ್ತಿದಿನ ಶಾಲೆಯಲ್ಲಿದ್ದು, ಉತ್ತಮ ಶಿಕ್ಷಣ ಪಡೆಯಲು ಕ್ರಮವಹಿಸುವ ಅಗತ್ಯವಿದೆ. ಸಮುದಾಯದ ನಾಯಕರು ಈ ಹಿನ್ನಲೆಯಲ್ಲಿ ಗ್ರಾಮವಾರು, ತಾಲೂಕುವಾರು ಅಧಿಕಾರಿಗಳೊಂದಿಗೆ ಸಹಕರಿಸಿ, ಪ್ರತಿ ಮಗುವಿನ ಮನೆಗೆ ಭೇಟಿ ನೀಡಿ, ಅವರ ಪಾಲಕರ ಮನ ಒಲಿಸುವ ಕಾರ್ಯ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಶಾಲೆಗಳಲ್ಲಿ ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಅನುವು ಆಗುವಂತೆ ಅನೇಕ ಸಕಾರಾತ್ಮಕ ಹಾಗೂ ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಕರು ನಿರ್ವಹಿಸುವ ಶಿಕ್ಷಣೇತರ ಕಾರ್ಯ ಚಟುವಟಿಕೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಶಿಕ್ಷಕರ ಕೊರತೆಯನ್ನು ನಿಗಿಸಿ, ಸಮರ್ಥ ಮತ್ತು ಸಮರ್ಪಕ ಶಿಕ್ಷಣವನ್ನು ನೀಡಲು ಮಿಷನ್ ವಿದ್ಯಾಕಾಶಿಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಗ್ರಾಮಮಟ್ಟದಲ್ಲಿ ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ತಂಡಗಳನ್ನು ರಚಿಸಿ, ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ, ಶಾಲೆಯ ಪ್ರತಿ ಗೈರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡುವ ಮತ್ತು ಶಾಲಾ ಹಾಜರಾತಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಸದ್ಬಳಕೆಗಾಗಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲು ಜಿಲ್ಲಾ ಪಂಚಾಯತ ಸಿಇಓ ಅವರಿಂದ  ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಿಆರ್‍ಪಿ, ಬಿಆರ್‍ಪಿ, ಬಿಇಓ ಮತ್ತು ಡಿಡಿಪಿಐ ಅವರು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ನಿರಂತರ ಭೇಟಿ ನೀಡಿದ ಬಗ್ಗೆ, ಜಿಪಿಎಸ್ ಫೋಟೊ ಹಾಗೂ ವರದಿಯನ್ನು ಪಡೆಯಲಾಗುತ್ತದೆ. ಶಿಕ್ಷಕರು ನಿಗದಿತ ಅವಧಿಗೆ ಶಾಲೆಯಲ್ಲಿ ಹಾಜರಿದ್ದು, ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗುತ್ತದೆ. ವಿವಿಧ ಶಾಲೆಗಳಿಗೆ ಇರುವ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ದುರಸ್ತಿ ಕಾರ್ಯಗಳನ್ನು ಕಾಲಾನುಕ್ರಮದಲ್ಲಿ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದ ಒಟ್ಟಾರೆ ಪ್ರಮಾಣ ಸುಧಾರಿಸುತ್ತಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣವು ಸರಾಸರಿಗಿಂತ ಕಡಿಮೆ ಇರುವುದು ಆತಂಕಕಾರಿ ವಿಷಯವಾಗಿದೆ. ಈ ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸಿ, ಈ ಸಮುದಾಯದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ತಕ್ಷಣದ ಕ್ರಮಗಳು ಅಗತ್ಯವಾಗಿವೆ ಎಂದು ಹೇಳಿದರು.
ಫಲಿತಾಂಶದಲ್ಲಿ ಹಿಂದುಳಿಯಲು ಕಾರಣಗಳನ್ನು ಮತ್ತು ಸರಕಾರ, ಶಿಕ್ಷಣ ಇಲಾಖೆ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಶಾಲಾ ಮಟ್ಟದಲ್ಲಿ ಆಯೋಜಿಸಲು ತಕ್ಷಣದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪೋಷಕರು ಮತ್ತು ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಲು ಕಾರ್ಯತಂತ್ರಗಳನ್ನು ರೂಪಿಸುವುದು ಮಹತ್ವವಾಗಿದೆ. ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶದ ಅಂಕಿ-ಅಂಶಗಳನ್ನು ಗಮನಹರಿಸಿದಾಗ ಜಿಲ್ಲಾವಾರು, ತಾಲೂಕುವಾರು, ಮತ್ತು ಶಾಲಾವಾರು ಎಸ್‍ಸಿ ಮತ್ತು ಎಸ್‍ಟಿ ಸೇರಿದಂತೆ ಅನುತ್ತೀರ್ಣವಾದ ವಿದ್ಯಾರ್ಥಿಗಳು ಯಾವ ವಿಷಯಗಳಲ್ಲಿ ಹೆಚ್ಚು ಅಂಕ ಕಳೆದುಕೊಳ್ಳುತ್ತಿದ್ದಾರೆ ಎಂಬುದರ ಚರ್ಚೆ ಮಾಡಿ ಸೂಕ್ತವಾದ ಕ್ರಮಗಳನ್ನು ವಹಿಸಬೇಕೆಂದು ಅವರು ಹೇಳಿದರು.
ಪೋಷಕರ ಬಡತನ ಮತ್ತು ಅನಕ್ಷರತೆ, ಮನೆಯಲ್ಲಿ ಓದಲು ಪೂರಕ ವಾತಾವರಣದ ಕೊರತೆ ಇರುವುದರಿಂದ ಮಕ್ಕಳು ಕೃಷಿ ಅಥವಾ ಇತರೆ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಶಾಲೆಗೆ ಬರದೆ ಇರಲು ಕಾರಣವಾಗಿದೆ. ಅದರಿಂದ ಸೂಕ್ತವಾಗಿ ಪರಿಶೀಲಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪೌಷ್ಟಿಕ ಆಹಾರದ ಕೊರತೆ ಮತ್ತು ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಮಾಹಿತಿಯನ್ನು ಪಡೆಯಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರಿಗೆ ವಿಶೇಷ ಬೋಧನೆ ನೀಡದಿರುವುದು, ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭ ಪಿ. ಅವರು ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆ, ಅರೆ ಅಲೆಮಾರಿ ಸಮುದಾಯ ಅಭಿವೃದ್ಧಿ ನಿಗಮ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಶಾಲಾ ಶಿಕ್ಷಣ ಇಲಾಖೆಯ ಮಕ್ಕಳ ದಾಖಲಾತಿ, ಕಲಿಕೆ ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಸಭೆಯಲ್ಲಿ ಚರ್ಚಿಸಿದರು. ಉಪ ಸಮನ್ವಯ ಅಧಿಕಾರಿ ಡಾ. ರೇಣುಕಾ ಅಮಲಜೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಎಸ್‍ಸಿ., ಎಸ್‍ಟಿ ಸಮುದಾಯದ ಪ್ರಮುಖರಾದ ಎಮ್.ಅರವಿಂದ, ಪ್ರೇಮನಾಥ ಕೆ. ಚಿಕ್ಕತುಂಬಳ, ಲಕ್ಷ್ಮಣ ಬಕ್ಕಾಯಿ, ಸುರೇಶ ಮಾಕಪ್ಪನವರ, ಕಲ್ಮೇಶ ಹಾದಿಮನಿ, ಅಶೋಕ ದೊಡ್ಡಮನಿ, ಮೋಹನ ಹಿರೇಮನಿ, ಯಲ್ಲಪ್ಪ ಮಂಟೂರ, ಹನುಮಂತಪ್ಪ ಚಲವಾದಿ, ಮಂಜುನಾಥ ಸವಣೂರ ಸೇರಿದಂತೆ ವಿವಿಧ ಮುಖಂಡರು, ಮಹಿಳಾ ಪ್ರಮುಖರು ಮಾತನಾಡಿದರು.
 ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವಿವಿಧ ನಿಗಮ ಮಂಡಳಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article