ಕುಕನೂರು18: ಗುದ್ನೆಪ್ಪನ ಮಠದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ತಹಸಿಲ್ದಾರ್ ಗೆ ಮನವಿ. ಪ್ರತಿವರ್ಷ ಹೊಸ್ತಲ ಹುಣ್ಣಿಮೆಯ ದಿನದಂದು ನಡೆಯುವ ಗುದ್ನೆಶ್ವರ ಜಾತ್ರೆಗೆ ಲಕ್ಷಾಂತರ ಜನ ಸೇರುತ್ತಾರೆ, ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತದೆ ಆದರೆ ಈಗ ಸರ್ಕಾರ ಗುದ್ನೆಪ್ಪನ ಮಠದಲ್ಲಿ ಗುರುತಿಸಿರುವ ಸರ್ಕಾರಿ ಕಚೇರಿಗಳಾದ ತಹಸಿಲ್ದಾರ್ ಕಟ್ಟಡ, ಬುದ್ಧ ಬಸವ ಅಂಬೇಡ್ಕರ್ ಭವನ, ನ್ಯಾಯಾಲಯ ಕಟ್ಟಡಗಳನ್ನು ನಿರ್ಮಾಣ ಮಾಡಲು ಮುಂದಾಗುತ್ತಿದೆ ಇದರಿಂದ ಗುದ್ನೇಪ್ಪನ ಮಠದ ನಿವಾಸಿಗಳಿಗೆ ಸೇವಾದಾರರಿಗೆ ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನಾನುಕೂಲವಾಗಲಿದ್ದು ಕೂಡಲೇ ಜಾಗವನ್ನು ಸ್ಥಳಾಂತರ ಮಾಡಬೇಕು ಇಲ್ಲದಿದ್ದರೆ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ವಾರ್ಡಿನ ನಿವಾಸಿಗಳು ತಹಸೀಲ್ದಾರ್ ರವರಿಗೆ ಮನವಿ ಮಾಡಿದರು.
ಮಠದ 18 ಜನ ಸೇವಾ ದಾರರು ಸುಮಾರು ವರ್ಷಗಳಿಂದ ಸೇವೆಯನ್ನು ಮಾಡುತ್ತಾ ಬಂದಿದ್ದು ಸೇವಾದಾರರಿಗೆ ಉಪಜೀವನ ನಡೆಸಲು ಮಠದ ಜಮೀನುಗಳನ್ನು ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ ಹಾಗೂ ನಮ್ಮ ಕುಟುಂಬಗಳು ಅದೇ ಜಮೀನಿನ ಮೇಲೆ ಅವಲಂಬಿತವಾಗಿದ್ದು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ, ವ್ಯವಸಾಯ ಮಾಡುವ ಜಮೀನನ್ನೇ ತಾವು ಸರ್ಕಾರಿ ಕಚೇರಿಗಳಿಗೆ ಜಾಗವನ್ನು ಗುರುತು ಮಾಡಿದ್ದು ಇದರಿಂದ 40 ರಿಂದ 50 ಕುಟುಂಬಗಳು ಬೀದಿ ಪಾಲಾಗುತ್ತವೆ, ಕುಕನೂರಿನ ಪಟ್ಟಣದ ಕೇಂದ್ರ ಸ್ಥಾನದಲ್ಲಿಯೇ ಸರ್ಕಾರಿ ಕಟ್ಟಡಗಳು ನಿರ್ಮಿಸಲು ಸಾಕಷ್ಟು ಸರ್ಕಾರಿ ಜಮೀನುಗಳಿವೆ ಆದರೆ ಉದ್ದೇಶ ಪೂರಕವಾಗಿಯೇ ಗುದ್ನೇಪ್ಪನ ಮಠದ ಆಸ್ತಿಯ ಮೇಲೆ ಕಣ್ಣು ಬಿದ್ದಿದೆ.
ಪ್ರತಿವರ್ಷ ಅಜ್ಜನ ಜಾತ್ರೆಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೂ ಕೂಡ ಇದರಿಂದ ತೊಂದರೆ ಉಂಟಾಗಲಿದ್ದು, ಇಷ್ಟು ವರ್ಷಗಳ ಕಾಲ ಮಠದ ಸೇವೆಯನ್ನು ಮಾಡುತ್ತಾ ಬಂದಿರುವ ಸೇವಾದಾರರಿಗೆ ಹಾಗೂ ಭಕ್ತಾದಿಗಳಿಗೆ ತೊಂದರೆ ಆಗದಂತೆ ಗುದ್ನೇಪ್ಪನ ಮಠದ ಜಾಗವನ್ನು ಬಿಟ್ಟು ಬೇರೆ ಕಡೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಬೇಕು ಇಲ್ಲದಿದ್ದರೆ ಮುಂದೆ ಬರಲಿರುವ ಲೋಕಸಭಾ ಚುನಾವಣೆಯನ್ನು ವಾರ್ಡಿನ ಅಷ್ಟು ನಿವಾಸಿಗಳು ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಮನವಿ ಮಾಡಿಕೊಂಡಿದ್ದಾರೆ.
ತಹಶೀಲ್ದಾರ್ ಕಚೇರಿ ಸಿಬ್ಬಂದಿ ಗಿರೀಶ್ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ವಾರ್ಡಿನ ನಿವಾಸಿಗಳಾದ ಗುದ್ನಯ್ಯ ಬಂಡಿ, ರುದ್ರಯ್ಯ ಗಲಬಿ, ಚನ್ನಬಸಯ್ಯ ದೂಪದ ,ರುದ್ರಯ್ಯ ಇನಾಮದಾರ್, ಶರಣಯ್ಯ ಹುಣಸಿಮರದ, ಸಿದ್ದಲಿಂಗಯ್ಯ ಬಂಡಿ, ಜಗನ್ನಾಥ್ ಭೋವಿ, ರುದ್ರಯ್ಯ ವಿರುಪಣ್ಣವರ್, ಮಲ್ಲಯ್ಯ ಹುಣಿಸಿಮರದ ಶರಣಯ್ಯ ಹೂವಿನಾಳ, ಸಂಗಯ್ಯ ಬಂಡಿ ಇತರರು ಇದ್ದರು.