ಶ್ರೀನಗರ, ಏಪ್ರಿಲ್ 29: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೇಂದ್ರಾಡಳಿತ ಪ್ರದೇಶದ 87 ಪ್ರವಾಸಿ ತಾಣಗಳ ಪೈಕಿ 48 ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶಿಸಿದೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಈ ಪ್ರವಾಸಿ ತಾಣಗಳು ದುರ್ಬಲ ಪ್ರದೇಶಗಳಲ್ಲಿ ಬರುತ್ತವೆ ಅಥವಾ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ತೀವ್ರಗೊಂಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯೂಸ್ಮಾರ್ಗ್, ತೌಸಾ ಮೈದಾನ, ದೂದ್ಪತ್ರಿ, ಬಂಗುಸ್, ಕರಿವಾನ್ ಡೈವರ್ ಚಂಡಿಗಮ್, ಅಹರ್ಬಲ್, ಕೌಸರ್ನಾಗ್, ವುಲರ್/ವಾಟ್ಲಾಬ್, ರಾಮ್ಪೋರಾ ಬಂಗುಸ್ ವ್ಯಾಲಿ, ರಾಜ್ಪೋರಾ ಮತ್ತು ಚೀರ್ಹಾರ್ ಮುಚ್ಚಲು ನಿರ್ಧರಿಸಲಾಗಿದೆ.
ಇನ್ನು ತೆರೆದಿರುವ ತಾಣಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗುತ್ತದೆ. ಒಂದು ವಾರದ ಹಿಂದಷ್ಟೇ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ್ದರು. 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು.ಈ ದಾಳಿಯ ಹೊಣೆಯನ್ನು ಲಷ್ಕರ್ -ಎ- ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿತ್ತು. ಆಕ್ರೋಶ ವ್ಯಕ್ತವಾದ ಬಳಿಕ ನಮ್ಮ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ನಮಗೂ ದಾಳಿಗೂ ಸಂಬಂಧವಿಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನಿಸಿತ್ತು.
ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಏಪ್ರಿಲ್ 23 ರಂದು 112 ವಿಮಾನಗಳ ಮೂಲಕ 17,653 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅವುಗಳಲ್ಲಿ 6,561 ಆಗಮನಗಳು ಮತ್ತು 11,092 ನಿರ್ಗಮನಗಳು. ಏಪ್ರಿಲ್ 24 ರಂದು, 4,456 ಆಗಮನಗಳು ಮತ್ತು 11,380 ನಿರ್ಗಮನಗಳು ಸೇರಿದಂತೆ 15,836 ಪ್ರಯಾಣಿಕರ ದಟ್ಟಣೆ ಇತ್ತು.
ಕಣಿವೆಯಲ್ಲಿ ಅಧಿಕಾರಿಗಳು ಸಕ್ರಿಯ ಭಯೋತ್ಪಾದಕರ ಮನೆಗಳನ್ನು ಸ್ಫೋಟಿಸಿದ ಬಳಿಕ ಕೋಪಗೊಂಡಿರುವ ಉಗ್ರರು ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಬಳಿ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದು, ಮತ್ತಷ್ಟು ದಾಳಿ ನಡೆಯುವ ಎಚ್ಚರಿಕೆ ಇದ್ದು, ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲುವ ದೃಷ್ಟಿಯಿಂದ ಪ್ರವಾಸಿ ತಾಣಗಳನ್ನೇ ಮುಚ್ಚಲಾಗುತ್ತಿದೆ.
ಭದ್ರತಾ ಸಂಸ್ಥೆಗಳು ರಾಜ್ಯಾದ್ಯಂತ ಬೃಹತ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸಂಘಟಿತ ದಾಳಿಗಳನ್ನು ನಡೆಸುತ್ತಿದ್ದು, ನೂರಾರು ಶಂಕಿತರು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡಿದವರನ್ನು ಬಂಧಿಸಿವೆ. ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆ ಕಣಿವೆಯಲ್ಲಿ ಸಕ್ರಿಯ ಭಯೋತ್ಪಾದಕರ ಹಲವಾರು ಮನೆಗಳನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ.