ಸೊಲ್ಲಾಪುರ: ಮೋಟಾರ್ ಬೋಟ್ ದುರಂತದಲ್ಲಿ ಚಾಲಕ ಸೇರಿದಂತೆ ನಾಪತ್ತೆಯಾಗಿದ್ದ ಆರು ಮಂದಿಯ ಮೃತದೇಹಗಳು ಇಂದು ಪತ್ತೆಯಾಗಿವೆ. ಉಜನಿ ಅಣೆಕಟ್ಟೆಯ ಭೀಮಾ ನದಿ ಪಾತ್ರದಲ್ಲಿ ಮಂಗಳವಾರ ಸಂಜೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಹಠಾತ್ ಉದ್ಭವಿಸಿದ ಚಂಡಮಾರುತದಿಂದ ಮಗುಚಿ ಬಿದ್ದಿತ್ತು. ಪರಿಣಾಮ ಮಕ್ಕಳು ಸಹಿತ ಅದರಲ್ಲಿದ್ದ ಆರು ಜನ ಕಣ್ಮರೆಯಾಗಿದ್ದರು. ರಕ್ಷಣಾ ಪಡೆ ಸದ್ಯ ಮೃತದೇಹಗಳನ್ನು ದಡಕ್ಕೆ ತಂದಿರುವುದಾಗಿ ಇಂದಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಸೂರ್ಯಕಾಂತ್ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಆರು ಮಂದಿಯ ಮೃತದೇಹಗಳು ನೀರಿನಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ. ಸೋಲಾಪುರ ಜಿಲ್ಲಾಡಳಿತ ಮತ್ತು ಪುಣೆ ಜಿಲ್ಲಾಡಳಿತ ಜಂಟಿಯಾಗಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದ್ದವು. ಗುರುವಾರ ಬೆಳಗ್ಗೆ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಮೃತದೇಹಗಳು ತೇಲಾಡುತ್ತಿರುವುದು ಕಾಣಿಸಿದೆ. ಸದ್ಯ ಆರು ಮೃತದೇಹಗಳನ್ನು ದಡಕ್ಕೆ ತಂದಿದ್ದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬೋಟ್ ಚಾಲಕ ಜ್ಞಾನದೇವ್ ಧಿಕಾಲೆ (28), ಗೌರವ್ ಡೋಂಗ್ರೆ (24), ಗೋಕುಲ್ ಜಾಧವ್ (30), ಕೋಮಲ್ ಜಾಧವ್ (25), ಮಹಿ ಜಾಧವ್ (03) ಮತ್ತು ಶುಭಂ ಜಾಧವ್ (02) ನಾಪತ್ತೆಯಾಗಿದ್ದರು. ದೋಣಿ ಮುಳುಗಿದ ಪ್ರದೇಶದಲ್ಲಿಯೇ ಆರು ಜನರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ದಡಕ್ಕೆ ತರುತ್ತಿದ್ದಂತೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬೋಟ್ನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತದೇಹಗಳನ್ನು ಸದ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.