ಹುಬ್ಬಳ್ಳಿ, ಏ.26: ರಾಹುಲ್ ಗಾಂಧಿಗೆ ಬುದ್ಧಿ ಮೆದುಳಿನಲ್ಲಿಲ್ಲ, ತೊಡೆಯಲ್ಲಿದೆ ಎಂದು ಮಾತಿನ ಭರದಲ್ಲಿ ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಳಿ ತಪ್ಪಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಪ್ರಹ್ಲಾದ್ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವ ದಿನೇಶ್ ಗುಂಡೂರಾವ್ ಹುಚ್ಚರು, ನಮ್ಮ ದೇಶ ಆಳಲು ರಾಹುಲ್ ಸಮರ್ಥನಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಗೆದ್ರೆ ಬಟಾಯಿಂದ ಬಂಗಾರ ಬರುತ್ತದೆ, ಇದನ್ನು ರಾಹುಲ್ ಗಾಂಧಿನೇ ಹೇಳಿದ್ದು. ಬಂಗಾರ ಬಂದ್ರೆ ನಮ್ಮ ದೇಶ ಯಾಕೆ ಬಡತನ ಇರುತ್ತಿತ್ತು ರಾಹುಲ್ಲಾ ಎಂದು ವ್ಯಂಗ್ಯವಾಡಿದ್ದಾರೆ. ಅವನು ಎಂದು ಏಕವಚನದಲ್ಲೇ ಕಿಡಿಕಾರಿದ ಯತ್ನಾಳ್, ‘ಅವನು ಏನ ಮಾತಾಡ್ತಾನೆ ಅವನಿಗೆ ಗೊತ್ತಿಲ್ಲ. ಮೊನ್ನೆ ರಾಣೆಬೆನ್ನೂರ ಕಡೆ ಬಂದಿದ್ದ, ಈ ವೇಳೆ ಹುಚ್ಚರಾದ ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಆತನಿಗೆ ಮೆಣಸಿನಕಾಯಿ ತೋರಿಸಿದರು.
ಈ ವೇಳೆ ರಾಹುಲ್ ಗಾಂಧಿ ಎಲ್ಲರೂ ಯಾಕೆ ಕೆಂಪು ಮೆಣಸಿಕಾಯಿ ಬೆಳೆದಿದ್ದೀರಿ ಎಂದು ಕೇಳಿದ್ದಾನೆ. ಇಂತವನಿಗೆ ನೀವು ದೇಶ ಕೊಡ್ತೀರಾ ಎಂದು ಹಾಸ್ಯ ಮಾಡಿದ್ದಾರೆ. ಮೋದಿ ಅವರು 220 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಕೊಟ್ಟಿದ್ದಾರೆ. ಈ ವೇಳೆ ಇದು ಮೋದಿ ವ್ಯಾಕ್ಸಿನ್, ಮಕ್ಕಳಾಗಲ್ಲ ಅಂದರು. ಆದರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವ್ಯಾಕ್ಸಿನ್ ಹಾಕಿಕೊಂಡಿದ್ದಾರೆ. ಅವರಿಗೆ ಏನಾದರೂ ಆಗಿದೆಯಾ? , ಎಂತಹ ನೀಚ ಬುದ್ದಿ ನೋಡಿ ಇವರದು ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.