ಬಳ್ಳಾರಿ,ನ.08 ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಕಾನೂನಾತ್ಮಕವಾಗಿ ಸಿಗಬೇಕಾದ ಎಲ್ಲ ಸೌಕರ್ಯ, ಸೌಲಭ್ಯಗಳನ್ನು ಪೂರೈಸುವುದು ಆಯಾ ನಗರ ಸ್ಥಳೀಯ-ಸಂಸ್ಥೆಗಳ ಮುಖ್ಯಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಶುಕ್ರವಾರ ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮದಡಿ ರಚಿತವಾದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ/ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ವಸತಿ ಮತ್ತು
ಪುನರ್ವಸತಿ ಹಾಗೂ ಪೌರ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಲು ಕ್ರಮವಹಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ನಿಗದಿಪಡಿಸಿದ ವೇತನ ಪಾವತಿಸುವುದು ಹಾಗೂ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮ್ಯಾನ್ಯುವೆಲ್ ಸ್ಯಾವೆಂಜರ್ಸ್ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಪ್ರವೇಶ ಶುಲ್ಕ, ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ ಹಾಗೂ ಇತರೆ ಸೌಲಭ್ಯ ಒದಗಿಸಲು ಮುತುವರ್ಜಿ ವಹಿಸಬೇಕು ಎಂದರು.
*ಸುರಕ್ಷಾ ಪರಿಕರ ಧರಿಸಿ ಕಾರ್ಯ ನಿರ್ವಹಿಸಲು ಅರಿವು ಮೂಡಿಸಿ:*
ಜಿಲ್ಲಾ ವ್ಯಾಪ್ತಿಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗು ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಕಾರ್ಮಿಕರು, ಪೌರಕಾರ್ಮಿಕರು ತಪ್ಪದೇ ಸುರಕ್ಷಾ ಪರಿಕರಗಳನ್ನು ಧರಿಸಿ ಕಾರ್ಯನಿರ್ವಹಿಸಲು ಸೂಚಿಸಬೇಕು. ಸುರಕ್ಷತೆಗಾಗಿ ಮತ್ತು ಆರೋಗ್ಯ ಹಿತದೃಷ್ಟಿಯಿಂದ ತಪ್ಪದೇ ಸುರಕ್ಷತಾ ಪರಿಕರಗಳನ್ನು ಧರಿಸಲು ತಿಳಿಸಬೇಕು. ಈ ಕುರಿತು ಪರಿಸರ ಅಭಿಯಂತರರು ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸದಸ್ಯರಾದ ಕಂದಕೂರ ರಾಮುಡು ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ರಹಿತ ಪೌರಕಾರ್ಮಿಕರಿಗೆ ಕಳೆದ 10 ವರ್ಷಗಳಿಂದ ಯಾವುದೇ ನಿವೇಶನ, ವಸತಿ ಸೌಲಭ್ಯ ನೀಡಿಲ್ಲ. ಆದರೆ ಅದೇ ಸ್ಥಾನದಲ್ಲಿರುವ ಅಧಿಕಾರಿಗಳು ಮಾತ್ರ ಮುಂಬಡ್ತಿ ಹೊಂದುತ್ತಿದ್ದಾರೆಯೇ ವಿನಃ ಪೌರಕಾರ್ಮಿಕರಿಗೆ ಮಾತ್ರ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರತಿಕ್ರಿಯಿಸಿ, ನಗರದಲ್ಲಿ ಪಾಲಿಕೆ ಒಡೆತನದ ಎಲ್ಲಾ ಜಾಗಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಆದರೂ ಅವರಿಗೆ ನಿವೇಶನ ಸೌಲಭ್ಯ ಒದಗಿಸಲಾಗುತ್ತಿಲ್ಲ. ಈ ಕೂಡಲೇ ನಗರದಲ್ಲಿ ಖಾಲಿ ಜಾಗವಿರುವ ಸ್ಥಳಗಳ ಮಾಹಿತಿ ನೀಡಬೇಕು. ಜಿಲ್ಲೆಯ ವಿವಿಧ ನಗರ ಸ್ಥಳೀಯ-ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಸೂರು ಕಲ್ಪಿಸುವ ಆದ್ಯತೆ ಅಧಿಕಾರಿಗಳದ್ದಾಗಬೇಕು ಎಂದು ತಿಳಿಸಿದರು.
ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 04 ಪೌರಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಕಳೆದ 10 ತಿಂಗಳುಗಳಿಂದ ವೇತನ ಪಾವತಿ ಮಾಡಿಲ್ಲ, ಬೆಳಗಿನ ಉಪಹಾರ ಸಹ ನೀಡಿಲ್ಲ ಮತ್ತು ಅವರಿಂದ ಹಣ ವಸೂಲಿ ಮಾಡಲಾಗಿದೆ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಕಂದಕೂರು ರಾಮುಡು ಅವರು ಸಭೆಯ ಗಮನಕ್ಕೆ ತಂದರು.
ಜಿಲ್ಲಾಧಿಕಾರಿಯವರು ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ ಅವರು, ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಲೋಡರ್ಸ್, ಕ್ಲೀನರ್ಸ್, ವಾಹನಚಾಲಕರಿಗೆ ನಿಗದಿತ ವೇಳೆಯೊಳಗೆ ವೇತನ ಪಾವತಿಸಿ, ವೇತನ ಸ್ಲಿಪ್ ನೀಡಬೇಕು. ಪಿಎಫ್ ಮತ್ತು ಇಎಸ್‌ಐ ವಂತಿಕೆ ಸರಿಯಾಗಿ ಪಾವತಿಯಾಗುತ್ತಿರುವ ಕುರಿತು ಖಾತ್ರಿಪಡಿಸಿಕೊಳ್ಳಬೇಕು. ಮಾಸ್ಟರ್ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಿಸಬೇಕು ಎಂದು ತಿಳಿಸಿದರು.
ಮುಂದಿನ ಸಭೆಯಲ್ಲಿ ಸಮಿತಿಯ ಸದಸ್ಯರಾದ ವಿವಿಧ ಇಲಾಖೆಗಳ ಮುಖ್ಯಸ್ಥರೇ ಸಭೆಗೆ ಹಾಜರಾಗಬೇಕು. ಇಲ್ಲದಿದ್ದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದಿನ್, ಸಮಿತಿ ಸದಸ್ಯರಾದ ಅರುಣ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರ ಸ್ಥಳೀಯ-ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.


