ಸಂತ್ರಸ್ಥೆಯರ ನೆರವಿಗೆ ಜಿಲ್ಲಾಧಿಕಾರಿಗಳ ವಿನೂತ ಪ್ರಯತ್ನ: ಆತ್ಮಸ್ಥೈರ್ಯ ತುಂಬಿದ ಡಿಸಿ ದಿವ್ಯ ಪ್ರಭು

Ravi Talawar
ಸಂತ್ರಸ್ಥೆಯರ ನೆರವಿಗೆ ಜಿಲ್ಲಾಧಿಕಾರಿಗಳ ವಿನೂತ ಪ್ರಯತ್ನ: ಆತ್ಮಸ್ಥೈರ್ಯ ತುಂಬಿದ ಡಿಸಿ ದಿವ್ಯ ಪ್ರಭು
WhatsApp Group Join Now
Telegram Group Join Now
ಧಾರವಾಡ : ತಮ್ಮದಲ್ಲದ ತಪ್ಪಿಗೆ ಪರಿತಪಿಸುತ್ತಿರುವ ಹಾಗೂ ಮಾನಸಿಕವಾಗಿ ಕುಗ್ಗಿ ಹಿಂಜರಿಕೆಯನ್ನು ಅನುಭವಿಸುತ್ತಿರುವ ಬಾಲ ಸಂತ್ರಸ್ಥೆಯರೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನೇರ ಸಂವಾದದ ಮೂಲಕ ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿದರು. ಮತ್ತು ಅವರ ಪಾಲಕರಿಗೆ ಧೈರ್ಯ ತುಂಬಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಪ್ರೋತ್ಸಾಹ ನೀಡಿದರು. ಇಂತಹ ಮಾನವೀಯ ಮನಸ್ಸುಗಳ ಮಿಲನಕ್ಕೆ  ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣ ಸಾಕ್ಷಿಯಾಯಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ, ವಾರ್ತಾ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಸಂಕಷ್ಟಕ್ಕಿಡಾದ ಅತ್ಯಾಚಾರ, ಪೋಕ್ಸೋ, ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿ ಸಂತ್ರಸ್ಥೆಯರು ಮತ್ತು ಅವರ ಪಾಲಕರೊಂದಿಗೆ ಸಂವಾದ ಮತ್ತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿದರು.
ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಲೈಂಗಿಕ ಶಿಕ್ಷಣದ ಅಗತ್ಯವಿದೆ. ವಿಶೇಷವಾಗಿ 13 ರಿಂದ 19 ವರ್ಷದವರೆಗೆ ಹೆಣ್ಣು ಮತ್ತು ಗಂಡು ಎಂಬ ವ್ಯತ್ಯಾಸವಿಲ್ಲದೆ ಅವರಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುತ್ತವೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ತಿಳುವಳಿಕೆ, ಮಾಹಿತಿ, ಆಪ್ತತೆ ಅಗತ್ಯವಿರುತ್ತದೆ. ಪಾಲಕರು ಹೆಚ್ಚು ಸಮಯವನ್ನು ಮಕ್ಕಳೊಂದಿಗೆ ಕಳೆದು ಅವರ ಭಾವನೆಗಳಿಗೆ, ಕುತೂಹಲಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಪೋಷಕರು ಬಾಲ್ಯ ವಿವಾಹವನ್ನು ಮಾಡುವ ಮುಂಚೆ ಒಂದು ಸಾರಿ ಮಕ್ಕಳ ಮನಸ್ಥಿತಿ, ಮಾನಸಿಕ ಸ್ಥಿತಿ, ದೈಹಿಕವಾಗಿ ಅವರ ಮೇಲೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ಮದುವೆ ಮಾಡಿದರೆ ನಮ್ಮ  ಭಾರ ಕಡಿಮೆ ಆಗುತ್ತದೆ ಎಂಬ ಮನಸ್ಥಿತಿಯಿಂದ ಪೋಷಕರು ಹೊರ ಬರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹೆಣ್ಣು ಮಕ್ಕಳು ಹುಟ್ಟಿದರೆ ಭಾರ ಎಂದು ಅಂದುಕೊಳ್ಳಬಾರದು. ಅವರಿಗೂ ಸಹ ಸರಿಯಾದ ಶಿಕ್ಷಣವನ್ನು ಕೊಡಿಸಿದರೆ, ಅವರು ಮುಂದೆ ಸಮಾಜದಲ್ಲಿ ಒಳ್ಳೆಯ ಸ್ಥಾನದಲ್ಲಿ ಬರಲು ಸಾಧ್ಯವಾಗುತ್ತದೆ. ಪ್ರಸ್ತುತ ದಿನದಲ್ಲಿ ಹಣ ಇರುತ್ತೆ, ಹೋಗುತ್ತೆ, ಬಡತನ ಇರುತ್ತದೆ, ಹೋಗುತ್ತದೆ. ಆದರೆ ಶಿಕ್ಷಣ ಕೊಟ್ಟರೆ ಎಲ್ಲವನ್ನೂ ಹೋಗಲಾಡಿಸಬಹುದು. ಮಕ್ಕಳು ಶಿಕ್ಷಣದಿಂದ ವಂಚಿತರಾದರೇ ತಮಗೆ ತಾವೇ ಮೋಸ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು ಎಂದರು.
ಪೋಷಕರಾದವರು ಮನೆಯಲ್ಲಿ ಮಕ್ಕಳೊಂದಿಗೆ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಬೇಕು. ಮನೆಯಲ್ಲಿ ಗಂಡು ಹೆಣ್ಣು ಎಂದು ಭೇದ ಭಾವ ಮಾಡದೆ, ಅವರಿಗೆ ಅರಿವು ಮೂಡಿಸಬೇಕು. ಗಂಡು ಮಕ್ಕಳಿಗೂ ಕೂಡ ಸಮಾಜದಲ್ಲಿ ಹೆಣ್ಣು ಮಕ್ಕಳೊಂದಿಗೆ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬುದನ್ನು ಅವರಿಗೂ ಸಹ ತಿಳಿ ಹೇಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ, ಸಮಾಜದಲ್ಲಿ ನಾವು ಅಂದುಕೊಂಡಿರುವ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡಬೇಕು. ಅದರ ಬಗ್ಗೆ ಅರಿವು ಮೂಡಿಸಬೇಕು.  ಯೌವ್ವನದ ವಯಸ್ಸಿನಲ್ಲಿ ಮನಸ್ಸನ್ನು ಚಂಚಲತೆಗೆ ಬಿಡದೆ ಸ್ಥಿರತೆಯಲ್ಲಿಟ್ಟುಕೊಳ್ಳಬೇಕು. ಇಂತಹ ಪರಿಸ್ಥಿತಿಗಳಿಂದ ದೂರವಿರಲು ಸಹಾಯವಾಗುತ್ತದೆ. ನಿಮ್ಮ ಮಕ್ಕಳಿಗೆ ಆಗಿರುವ ದೌರ್ಜನ್ಯವು ಬೇರೆ ಮಕ್ಕಳಿಗೂ ಆಗಬಾರದು ಎಂದು ನೀವು ಅರಿತು, ಇಲಾಖೆಗಳೊಂದಿಗೆ ಕೈಜೋಡಿಸಿದರೆ ಮುಂದೆ ಈ ರೀತಿ ಆಗದೆ ಇರುವ ಹಾಗೆ ನೋಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ತಂಡವು ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ತಿಳಿಸುತ್ತದೆ. ಬಾಲ್ಯ ವಿವಾಹ ಮಾಡುವುದು ಕಾನೂನುಬಾಹಿರ ಮತ್ತು ಅದಕ್ಕೆ ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಕೆ ನೀಡಲಾಗುತ್ತದೆ. ಬಾಲ್ಯ ವಿವಾಹವನ್ನು ತಡೆಗಟ್ಟಲು ನಾವೆಲ್ಲರೂ ಶ್ರಮಿಸಿ, ಸರ್ಕಾರದ ಇಲಾಖೆಗಳೊಂದಿಗೆ ಕೈಜೋಡಿಸಿದರೆ ಇಂತಹ ಸಮಸ್ಯೆಗಳು ಆದಷ್ಟು ಬೇಗ ತಡೆಗಟ್ಟಬಹುದು ಎಂದು ಹೇಳಿದರು.
ಬಾಲ್ಯ ವಿವಾಹದಿಂದ ಹುಡುಗಿಯ ಆರೋಗ್ಯ, ಶಿಕ್ಷಣ, ಮತ್ತು ಮಾನಸಿಕ ಸ್ಥಿತಿಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿದರು. ಪೋಷಕರು ಒಪ್ಪದಿದ್ದರೆ ಅಥವಾ ಬಾಲಕಿಯ ರಕ್ಷಣೆ ಅಗತ್ಯವಿದ್ದರೆ, ಅವಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ಬಾಲಕಿಗೆ ಸಖಿ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ನೀಡಿ, ಆಪ್ತಸಮಾಲೋಚನೆ ನಡೆಸಿ, ಅವಳ ಶಿಕ್ಷಣ ಮುಂದುವರಿಸಲು ಬೇಕಾದ ಎಲ್ಲಾ ನೆರವು ಮತ್ತು ಪೆÇ್ರೀತ್ಸಾಹ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ಥ ಮಗುವಿಗೆ ಧೈರ್ಯ ತುಂಬಿ, ನ್ಯಾಯ ಒದಗಿಸುವ ಪ್ರಕ್ರಿಯೆಯಲ್ಲಿ ಸಖಿ ಕೇಂದ್ರ ಪ್ರಮುಖ ಪಾತ್ರ ವಹಿಸುತ್ತದೆ. ಸಂತ್ರಸ್ಥ ಮಗು ಯಾವುದೇ ಭಯವಿಲ್ಲದೆ, ಮುಕ್ತವಾಗಿ ಮಾತನಾಡಲು, ಸಖಿ ಕೇಂದ್ರವು ಸುರಕ್ಷಿತ ಮತ್ತು ಸ್ನೇಹಪರ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಮತ್ತು ಗಂಭೀರ ಸಮಸ್ಯೆಗಳನ್ನು ಕೇವಲ ತಡೆಗಟ್ಟುವುದಲ್ಲದೆ, ಸಂತ್ರಸ್ತರಿಗೆ ಮಾನಸಿಕ, ಸಾಮಾಜಿಕ, ಕಾನೂನಾತ್ಮಕ ಮತ್ತು ವೈದ್ಯಕೀಯ ನೆರವನ್ನು ಒಂದೇ ಸ್ಥಳದಲ್ಲಿ ಒದಗಿಸಿ, ಅವರು ಮತ್ತೆ ಸಹಜ ಜೀವನಕ್ಕೆ ಮರಳಲು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.
*ಸಖಿ ಕೇಂದ್ರ:* ಹಿಂಸೆಯಿಂದ ಸಂತ್ರಸ್ತರಾದ ಮಹಿಳೆಯರು ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಮಗ್ರ ಬೆಂಬಲವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ವೈದ್ಯಕೀಯ, ಕಾನೂನು, ಮಾನಸಿಕ ಮತ್ತು ತಾತ್ಕಾಲಿಕ ಆಶ್ರಯದಂತಹ ಸೇವೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಖಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಖಿ ಕೇಂದ್ರಗಳು ಸಾರ್ವಜನಿಕರಿಗೆ ಮಹಿಳಾ ಸಹಾಯವಾಣಿ (181), ಮಕ್ಕಳ ಸಹಾಯವಾಣಿ (1098), ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರಿಂದ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನೀಡುತ್ತವೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವಾಯ್.ಪಾಟೀಲ ಅವರು ಮಾತನಾಡಿ, ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಮತ್ತು ಸಂತ್ರಸ್ಥೆಯರಿಗೆ ನಿಯಮಾನುಸಾರ ತಕ್ಷಣ ಸ್ಪಂದಿಸಿ, ಆಶ್ರಯ ನೆರವು ನೀಡಲಾಗುತ್ತದೆ. ಬಾಲ ಗರ್ಭಿಣಿಯವರಿಗೆ ಪ್ರತ್ಯೇಕವಾದ ವಸತಿ ನಿಲಯದ ಅಗತ್ಯವಿದೆ. ಮಿಷನ್ ವಾತ್ಸಲ್ಯ ಯೋಜನೆಯಡಿ ಸಮರ್ಪಕವಾಗಿ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2000 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್‍ಗಳ ಪೀಠವಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ರಚಿಸಲಾಗಿದೆ. ಇದು ಮಕ್ಕಳ ಆರೈಕೆ, ರಕ್ಷಣೆ, ಚಿಕಿತ್ಸೆ, ಅಭಿವೃದ್ಧಿ ಮತ್ತು ಪುನರ್ವಸತಿಗಾಗಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಅಂತಿಮ ಅಧಿಕಾರ ಹಾಗೂ ಅವರ ಮೂಲಭೂತ ಅಗತ್ಯಗಳು ಮತ್ತು ಮಾನವ ಹಕ್ಕುಗಳ ರಕ್ಷಣೆಯನ್ನು ಒದಗಿಸುವ ಅಂತಿಮ ಅಧಿಕಾರ ಹೊಂದಿದೆ ಎಂದು ಅವರು ತಿಳಿಸಿದರು.
 ಜಿಲ್ಲೆಯಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ಅಂದರೆ ಬಾಲ್ಯವಿವಾಹಕ್ಕೆ ಒಳಗಾದ, ಲೈಂಗಿಕ, ದೈಹಿಕ ದೌರ್ಜನ್ಯಕ್ಕೆ ಒಳಗಾದ, ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡ, ಬಾಲಕಾರ್ಮಿಕ ಮಕ್ಕಳು, ಮನೆ ಬಿಟ್ಟು ಓಡಿ ಹೋದ ಮಕ್ಕಳು, ದುಶ್ಚಟಕ್ಕೆ ಬಲಿಯಾದ, ದತ್ತು ಪ್ರಕ್ರಿಯೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಮಕ್ಕಳ ಪ್ರಕರಣಗಳನ್ನು ಈ ಸಮಿತಿ ನಿರ್ವಹಿಸಲಿದೆ. ಸಂತ್ರಸ್ಥರು ಹಾಗೂ ಅವರ ಪಾಲಕರು ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬಿ.ವಾಯ್.ಪಾಟೀಲ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಹೆಚ್.ಹೆಚ್.ಕುಕನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುನಿತಾ ನಾಡಿಗೇರ ಅವರು ನಿರೂಪಿಸಿದರು. ಕಾರ್ಯಕ್ರಮ ಅಧಿಕಾರಿ ಡಾ. ಕಮಲಾ ಬೈಲೂರ ಅವರು ವಂದಿಸಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಎಮ್. ಹೊನಕೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಾಧರ ಎಮ್. ದೊಡ್ಡಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಸಮಾಜ ಕಲ್ಯಾಣ ಇಲಾಖೆಯ ಗೆಜೆಟೆಡ್ ಅಧಿಕಾರಿ ಲಲಿತಾ ಹಾವೇರಿ, ರೂಡ್ ಸೆಟ್ ನಿರ್ದೇಶಕ ಪ್ರಥ್ವಿರಾಜ್ ಜೆ.ಪಿ, ನವನಗರ ಆಯುಕ್ತರ ಕಚೇರಿ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ವಿಜಯಕುಮಾರ ವಿ. ಟಿ., ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಅಜೇಯ ಎನ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಸಂತ್ರಸ್ಥ ಬಾಲಕಿಯರು, ಅವರ ಪಾಲಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿಗಳು, ಸರ್ಕಾರಿ ವಕೀಲರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಖಿ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article