ಯಾದಗಿರಿ, ಸೆಪ್ಟೆಂಬರ್ 13: ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಯಾದಗಿರಿಯಲ್ಲಿ ಇನ್ನೂ ಜೀವಂತ ಇರುವುದು ಬೆಳಕಿಗೆ ಬಂದಿದೆ. ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿದ ವಿದ್ಯಮಾನ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಿಂದ ವರದಿಯಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸವರ್ಣೀಯ ಯುವಕನೊಬ್ಬನ ಮೇಲೆ ದಲಿತ ಕುಟುಂಬ ಪೊಲೀಸರಿಗೆ ದೂರು ನೀಡಿದ್ದೇ ಬಹಿಷ್ಕಾರಕ್ಕೆ ಕಾರಣವಾಗಿದೆ.
ದಲಿತರಿಗೆ ಅಂಗಡಿಗಳಲ್ಲಿ ಸಾಮಗ್ರಿ ನೀಡದಂತೆ ಸವರ್ಣೀಯರು ಕಟ್ಟಪ್ಪಣೆ ಮಾಡಿದ್ದಾರೆ. ಇದರಿಂದಾಗಿ ದಲಿತರ ಮಕ್ಕಳಿಗೆ ಪೆನ್ನು, ನೋಟ್ ಬುಕ್ ಕೂಡ ಸಿಗದ ಪರಿಸ್ಥಿತಿ ದಲಿತ ಕುಟುಂಬಗಳದ್ದಾಗಿದೆ.
ಪ್ರಕರಣದ ಹಿನ್ನೆಲೆ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಸವರ್ಣೀಯ ಯುವಕ ಅತ್ಯಾಚಾರ ಎಸಗಿದ್ದ. ಪರಿಣಾಮವಾಗಿ 15 ವರ್ಷದ ಬಾಲಕಿ 5 ತಿಂಗಳ ಗರ್ಭಿಣಿಯಾಗಿದ್ದಳು. ಪ್ರಕರಣ ಸಂಬಂಧ ಬಾಲಕಿ ಪೋಷಕರು ಯುವಕನ ವಿರುದ್ಧ ಪೊಕ್ಸೋ ಕೇಸ್ ದಾಖಲಿಸಿದ್ದರು. ಅಗಸ್ಟ್ 12 ರಂದು ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಲಾಗಿತ್ತು.
ಇದೇ ಸಂದರ್ಭದಲ್ಲಿ ಸಂಧಾನಕ್ಕೆ ಬರುವಂತೆ ಸವರ್ಣೀಯರಿಂದ ಬಾಲಕಿಯ ಪೋಷಕರಿಗೆ ಕರೆ ಹೋಗಿತ್ತು. ಆದರೆ, ಸಂಧಾನಕ್ಕೆ ಬಾರದೇ ಅವರು ಯುವಕನ ವಿರುದ್ಧ ಪೊಕ್ಸೋ ಕೇಸ್ ದಾಖಲಿಸಿದ್ದರು. ಇದರಿಂದ ಕೋಪಗೊಂಡು ಸವರ್ಣೀಯ ಮುಖಂಡರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.