ವಿಜಯನಗರ(ಹೊಸಪೇಟೆ), : ಗ್ರಾಮ ಪಂಚಾಯಿತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸಿ ಜೆಜೆಎಂ ಕಾಮಗಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಹೇಳಿದರು.
ಹೊಸಪೇಟೆ ತಾಲೂಕಿನ ಬೆಳಗೋಡು, ಕಲ್ಲಿರಾಂಪುರ, ಕಾಲಘಟ್ಟ, ನರಸಾಪುರ , ಕಡ್ಡಿರಾಂಪುರ ಬೆನಕಾಪುರ ಮತ್ತು ಮಲಪನಗುಡಿ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.
ಹಾಜರಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಯವರಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಸಕ್ರಿಯಗೊಳಿಸಿ ಕಾರ್ಯಚರಣೆ ಮತ್ತು ನಿರ್ವಹಣೆ ನೀತಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಅನುಷ್ಟಾನಗೊಳಿಸಲು ಸೂಚಿಸಿದರು. ಜಿಲ್ಲೆಯ ಎಲ್ಲಾ ಗ್ರಾಮವನ್ನು 24*7 ಗ್ರಾಮವನ್ನಾಗಿ ಘೊಷಿಸಲು ತಿಳಿಸಿದರು. ಜೆಜೆಎಂ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಮೀಟರ್ ಅಳವಡಿಸುವುದರಿಂದ ನೀರಿನ ಮೌಲ್ಯ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದರು. ನಂತರ ಮಲಪನಗುಡಿ ಬಹುಗ್ರಾಮ ಕುಡಿಯುವ ನೀರು ಶುದ್ದೀಕರಣ ಘಟಕವನ್ನು ಪರಿಶೀಲಿಸಿದರು.
ಗ್ರಾಮಗಳಲ್ಲಿ ಸಾರ್ವಜನಿಕರಿಂದ ಜೆಜೆಎಂ ಯೋಜನೆಯ ಕುರಿತು ಸಮಾಲೋಚನೆ ನಡೆಸಿದ ವೇಳೆ ಜೆಜೆಎಂ ಕಾಮಗಾರಿಯ ಅನುಷ್ಟಾನ ಮುಂಚಿತವಾಗಿ ಗ್ರಾಮಗಳಲ್ಲಿ ಯಾವುದೇ ಪೈಪ್ ಲೈನ್ ವ್ಯವಸ್ಥೆ ಇಲ್ಲದೇ ಒಂದು ಮಿನಿ ಟ್ಯಾಂಕ್ ಮೂಲಕ ನೀರು ಸರಬರಾಜುವಾಗುತ್ತಿತ್ತು. ಜೆಜೆಎಂ ಯೋಜನೆ ಅನುಷ್ಠಾನದ ಬಳಿಕ ಪ್ರತಿ ಮನೆಗಳಿಗೆ ನಳ ಸಂಪರ್ಕಗಳಿಂದ ನೀರಿನ ಸೌಲಭ್ಯ ದೊರಕಿದೆ ಎಂದು ಕಾಲಗಟ್ಟ ಗ್ರಾಮದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗ ಕಾರ್ಯಪಾಲಕ ಅಭಿಯಂತರಾದ ಎಸ್.ದೀಪಾ, ತಾಲೂಕು ವೈದ್ಯಾಧಿಕಾರಿಗಳು ಬಸವರಾಜು, ತಾಪಂ ಇಒ ಎಂ.ಡಿ.ಆಲಂಭಾಷಾ, ಪಿಆರ್‌ಇಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಗ್ರಾಮೀಣ ನೀರು ಸರಬರಾಜು ಕಾರ್ಯಪಾಲಕ ಅಭಿಯಂತರ ವೀರೇಶ್ ನಾಯಕ, ಕಿರಿಯ ಅಭಿಯಂತರ ಸುರೇಶ್, ನಾಗೇನಹಳ್ಳಿ ಪಿಡಿಓ ವಾಸುಕಿ, ವಿಡಬ್ಲೂಎಸ್‌ಸಿ ಸಮಿತಿ ಸದಸ್ಯರು ಹಾಜರಿದ್ದರು.