ಬೆಂಗಳೂರು: ಕಾಂಗೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ ಎಂಬುದಾಗಿ ಪ್ರಧಾನಿ ಮೋದಿ ಪ್ರಚೋದನಾಕಾರಿ ಭಾಷಣ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಾಖಲಿಸಿದ್ದ ಖಾಸಗಿ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ.
”ಪ್ರಧಾನಿ ಭಾಷಣದಿಂದ ಹಿಂದೂ – ಮುಸ್ಲಿಮರ ನಡುವೆ ಗೊಂದಲಕ್ಕೆ ಕಾರಣವಾಗಲಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು” ಎಂದು ಕೋರಿ ಬೆಂಗಳೂರಿನ ಹೆಬ್ಬಾಳದ ನಿವಾಸಿ ಜಿಯಾವುರ್ ರಹಮಾನ್ ನೊಮಾನಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಎನ್ ಶಿವಕುಮಾರ್ ಅವರು, ದೂರುದಾರರು ಸಲ್ಲಿಸಿರುವ ಮನವಿಯಂತೆ ಪ್ರಕರಣವನ್ನು ತನಿಖೆಗೆ ವಹಿಸುವುದಕ್ಕೆ ಅರ್ಹವಿಲ್ಲ ಎಂದು ಅಭಿಪ್ರಾಯಪಟ್ಟು ದೂರನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಅಲ್ಲದೇ, ಸಿಆರ್‌ಪಿಸಿ ಸೆಕ್ಷನ್ 200ರ ಅಡಿ ಖಾಸಗಿ ದೂರು ದಾಖಲಿಸಿದ್ದು, ಸೆಕ್ಷನ್ 156 (3) ಅಡಿ ಆದೇಶಿಸಲು ಪ್ರಕರಣ ಅರ್ಹವಿಲ್ಲ ಎಂದು ತಿಳಿಸಿ ವಜಾಗೊಳಿಸಿ ಆದೇಶಿಸಲಾಗಿದೆ.