ಬೆಂಗಳೂರು: ಬೇಸಿಗೆ ಬಿಸಿಲಿನ ತಾಪ ಕೋರ್ಟ್ ಗಳ ಮೇಲೆಯೂ ಪರಿಣಾಮ ಬೀರುತ್ತದೆ. ಈ ವರ್ಷ ಬಿಸಿಲಿನ ತಾಪ ಬಹಳ ಹೆಚ್ಚಾದ ಹಿನ್ನೆಲೆಯಲ್ಲಿ ಏಪ್ರಿಲ್ 18 ರಿಂದ ಮೇ 31 ರವರೆಗೆ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳ ಕಲಾಪದಲ್ಲಿ ಭಾಗಿಯಾಗಲು ವಕೀಲರು ಧರಿಸಬೇಕಿದ್ದ ಕಪ್ಪು ಕೋಟ್ ಗೆ ಈಗ ವಿನಾಯಿತಿ ನೀಡಿ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಏಪ್ರಿಲ್ 5ರಂದು ಮನವಿ ನೀಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 16 ರಂದು ನಡೆದಿರುವ ಪೂರ್ಣ ನ್ಯಾಯಾಲಯದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ದೈನಂದಿನ ಸೂಚಿತ ಡ್ರೆಸ್ ಬದಲಾಗಿ ವಕೀಲರು ಶ್ವೇತವರ್ಣದ ಶರ್ಟ್ ಅಥವಾ ಯಾವುದೇ ಬಣ್ಣದ ಗಂಭೀರತೆ ಬಿಂಬಿಸುವ ಶ್ವೇತವರ್ಣದ ಸಲ್ವಾರ್ ಕಮೀಜ್ ಇಲ್ಲವೇ ಸೀರೆ ಜೊತೆಗೆ ಸಾದಾ ಶ್ವೇತ ವರ್ಣದ ಕುತ್ತಿಗೆ ಬ್ಯಾಂಡ್ ಧರಿಸಿ ಕಲಾಪದಲ್ಲಿ ಭಾಗಿಯಾಗಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ತಿಳಿಸಿದ್ದಾರೆ.