ಬೆಂಗಳೂರು,27: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 2015-16ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಎಲ್ಲಾ 15 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣ ಸಂಬಂಧ ಸುಧೀರ್ಘ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶರಾದ ಮುರಳೀಧರ ಪೈ ಗುರುವಾರ ಪ್ರಕಟಿಸಿದ್ದಾರೆ.
ಸಾಕ್ಷ್ಯಧಾರಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣದಲ್ಲಿ ಒಟ್ಟು 19 ಮಂದಿ ಆರೋಪಿಗಳಿದ್ದರು. ಅವರ ಪೈಕಿ ವಿಚಾರಣೆ ಹಂತದಲ್ಲಿಯೇ ಆರೋಪಿಗಳಾಗಿದ್ದ ಓಬಳರಾಜು, ರುದ್ರಪ್ಪ ಮತ್ತು ರಂಗನಾಥ್ ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲಾಗಿತ್ತು. ಎರಡನೇ ಆರೋಪಿಯಾಗಿದ್ದ ಶಿವಕುಮಾರಯ್ಯ ಅಲಿಯಾಸ್ ಗುರೂಜಿ ವಿಚಾರಣಾ ಹಂತದಲ್ಲಿಯೇ ಸಾವನ್ನಪ್ಪಿದ್ದರು. ಹೀಗಾಗಿ, ಅವರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಉಳಿದಂತೆ ಕುಮಾರಸ್ವಾಮಿ, ಈರಮಲ್ಲಯ್ಯ, ಸಂತೋಷ್ ಅಗಸಿಮನಿ, ಕೆ ಎಂ ಮುರಳೀಧರ ಮತ್ತು ಅನಿಲ್ ಕುಮಾರ್ ಸೇರಿದಂತೆ 15 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಗುರುವಾರ ತೀರ್ಪು ಪ್ರಕಟಿಸಲಾಗಿದೆ.