‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಸೆಪ್ಟೆಂಬರ್ 29ರಿಂದ ಈ ರಿಯಾಲಿಟಿ ಶೋ ಪ್ರಾರಂಭ ಆಗುತ್ತಿದೆ. ಈ ಬಾರಿಯ ಬಿಗ್ ಬಾಸ್ನಿಂದ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದಾರೆ. 11ನೇ ಸೀಸನ್ ಎಂಬ ಕಾರಣಕ್ಕೆ ಈಗ ಹೊಸ ಲೆಕ್ಕ ಎಂದು ವಾಹಿನಿಯವರೇ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸುದ್ದಿಗೋಷ್ಠಿ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.
ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ನೊಂದಿಗೆ ಬಿಗ್ ಬಾಸ್ ಮೂಡಿ ಬರುತ್ತಿದೆ ಎನ್ನುವ ಸೂಚನೆಯನ್ನು ವಾಹಿನಿಯವರು ನೀಡಿದ್ದಾರೆ. ಇದು ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಬಗ್ಗೆ ವಾಹಿನಿ ಕಡೆಯಿಂದ ಉತ್ತರ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ.
ಪ್ರತಿ ಬಾರಿ 17 ಸ್ಪರ್ಧಿಗಳು ಇರುತ್ತಾರೆ. ಈ ಬಾರಿ ವಾಹಿನಿಯವರು ಎಷ್ಟು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ವಿಚಾರ ರಿವೀಲ್ ಆಗಲಿದೆ. ಕಳೆದ ಬಾರಿ ಚಾರ್ಲಿ ಶ್ವಾನ ಬಿಗ್ ಬಾಸ್ ಮನೆಗೆ ಬರುತ್ತದೆ ಎಂದು ಹೇಳಲಾಗಿತ್ತು. ಈ ರೀತಿಯ ವಿಶೇಷ ಅತಿಥಿಗಳ ಘೋಷಣೆ ಆಗಲಿದೆಯೇ ಎನ್ನುವ ಕುತೂಹಲವೂ ಇದೆ.