ಹೊಸಪೇಟೆ: ಭ್ರಷ್ಟಾಚಾರಕ್ಕ್ ಖಡಿವಾಣ ಹಾಕಲು ಆಸೆಗಳನ್ನು ಮಿತಿಯಲ್ಲಿ ಇರಿಸಬೇಕಿದೆ ಹಾಗಾದಾಗ ಮಾತ್ರ ಭ್ರಷ್ಟಚ್ಛ್ರಾರ್ ನಿಯಂತ್ರಿಸ ಬಹುದು . ಈ ಕೆಲಸವನ್ನು ಮಹಿಳೆ ಸಮರ್ಥವಾಗಿ ಮಾಡಲು ಸಾಧ್ಯ, ಎಂದು ಹಿರಿಯ ಯೋಗ ಸಾಧಕಿ ಉಮಾ ವಿಶ್ವನಾಥ್ ಹೇಳಿದರು.
ಪತಂಜಲಿ ಯೋಗ ಸಮಿತಿ ಮತ್ತು ಫ್ರೀಡಂ ಪಾರ್ಕ್ ಯೋಗ ಸ್ನೇಹ ಬಳಗದ ವತಿಯಿಂದ ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ನಡೆದ “ವಿಶ್ವ ಮಹಿಳಾ ದಿನಾಚರಣೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಪಾರ್ಕ್ನಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಒಂದು ತಿಂಗಳ ಕಾಲ ಮಹಿಳೆಯರಿಂದಲೇ ಯೋಗ ಶಿಕ್ಷಣ ತರಬೇತಿ ನೀಡಲಾಗಿತ್ತು, ಅದರ ಮುಕ್ತಾಯದ ಸಂಕೇತವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
‘ಅತಿಯಾದ ಆಸೆ ಆರಂಭವಾಗುವುದೇ ಮನೆಯಿಂದ. ಮನೆಯೊಡತಿ ಈ ಆಸೆಗೆ ನಿಯಂತ್ರಣ ಹೇರಿದಾಗ ಇಡೀ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ. ಅಲ್ಲಿ ಕೊಳ್ಳುಬಾಕ ಸಂಸ್ಕೃತಿ ನಿಯಂತ್ರಣದಲ್ಲಿರುತ್ತದೆ. ಇದು ಪರೋಕ್ಷವಾಗಿ ಭ್ರಷ್ಟಾಚಾರ ನಿಯಂತ್ರಣಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಮಹಿಳೆ ಸಮಾಜದ ದೊಡ್ಡ ಪಿಡುಗನ್ನು ನಿವಾರಿಸುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುವುದು ಸಾಧ್ಯವಿದೆ’ ಎಂದು ಉಮಾ ಪ್ರತಿಪಾದಿಸಿದರು.
ಮಹಿಳೆಯರು ಹೆಚ್ಚಾಗಿ ಯೋಗ, ಪ್ರಾಣಾಯಾಮದಲ್ಲಿ ತೊಡಗಿಸಿಕೊಂಡು ತಮ್ಮ ದೈಹಿಕ, ಮಾನಸಿಕ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಗರಸಭೆಯ ವಿದ್ಯುತ್ ಎಂಜಿನಿಯರ್ ಸುಶೀಲಾ ಮಧುಕರ್ ಮಾತನಾಡಿ, ಮಹಿಳೆ ಇಂದು ರಕ್ಷಣಾ ಕ್ಷೇತ್ರ ಸಹಿತ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾಳೆ, ಕಷ್ಟ ಬಂದಾಗ ಸಂಹರಿಸುವ ದೇವಿ ಅವತಾರವನ್ನು ತಾಳುವುದೂ ಆಕೆಗೆ ಸಾಧ್ಯವಿದೆ. ಹೀಗಾಗಿ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಯತ್ನಿಸುತ್ತಲೇ ಸಮಾಜದಲ್ಲಿನ ತಮ್ಮ ಹೊಣೆಯನ್ನೂ ಸಮರ್ಥವಾಗಿ ನಿಭಾಯಿಸಬೇಕು ಎಂದರು.
‘ಹೊಸಪೇಟೆ ಟೈಮ್ಸ್’ ಪತ್ರಿಕೆಯ ಸಂಪಾದಕಿ ರೇಖಾ ಪ್ರಕಾಶ್ ಮಾತನಾಡಿ, ಗ್ರಾಮೀಣ ಮಹಿಳೆಯರು ಈಗಲೂ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ‘ಗೃಹಿಣಿ’ ಎಂಬ ಪದವಿ ಎಲ್ಲಾ ಸ್ಥಾನಮಾನಗಳಿಗಿಂತಲೂ ಮಿಗಿಲಾದುದು, ಇಡೀ ಕುಟುಂಬ, ಸಮಾಜವನ್ನು ಉದ್ಧರಿಸುವ ಶಕ್ತಿ ಈ ಒಂದು ಪದದಲ್ಲಿ ಇದೆ. ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಮಹಿಳಾ ಪ್ರಭಾರಿ ಮಂಗಳಮ್ಮ ಅವರು ಒಂದು ತಿಂಗಳ ಕಾಲ ಮಹಿಳಾ ಯೋಗ ಸಾಧಕಿಯರಿಂದಲೇ ತರಗತಿ ನಡೆಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಹಿರಿಯ ವೈದ್ಯೆ ಡಾ.ಎ.ಸುಮಂಗಲಾದೇವಿ, ಕೇಂದ್ರದ ಸಂಚಾಲಕ ಶ್ರೀರಾಮ, ವೇದಿಕೆಯಲ್ಲಿದ್ದರು. ಶೈಲಜಾ ಕಳಕಪ್ಪ ಪ್ರಾಸ್ತಾವಿಕ ಮಾತನಾಡಿದರು. ಶೋಭಾ, ನೇತ್ರಾವತಿ, ಚೆನ್ನಮ್ಮ ಅರ್ಚನಾ, ಗೌರಮ್ಮ ತಮ್ಮ ಅನಿಸಿಕೆ ಹಂಚಿಕೊಂಡರು.
ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಮುಖ್ಯಸ್ಥ ಅನಂತ ಜೋಷಿ, ರಾಜಶೇಖರ, ಪಾಂಡುರಂಗ, ವೀರಣ್ಣ ಪಾಲ್ಗೊಂಡಿದ್ದರು. ಶಿವಶಂಕರಯ್ಯ ಪ್ರಾರ್ಥಿಸಿದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.