ಬೆಳಗಾವಿ : ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮವನ್ನು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದೊಂದಿಗೆ ವಿಲೀನ ಮಾಡಿದರೂ ಕೈಮಗ್ಗ ನೇಕಾರರ ಹಿತರಕ್ಷಣೆಯ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಯಾಗದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ವಿಧಾನಪರಿಷತ್ತಿನಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಡಾ. ತಳವಾರ್ ಸಾಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೈಮಗ್ಗ ಅಭಿವೃದ್ಧಿ ನಿಗಮವನ್ನು ವಿಲೀನ ಮಾಡಿದರೂ ನೇಕಾರರಿಗೆ ನಿರಂತರ ನೂಲು ಪೂರೈಕೆ ಮಾಡಿ ಉದ್ಯೋಗ ಒದಗಿಸಲಾಗುವುದು. ಕೈಮಗ್ಗ ಉತ್ಪನ್ನ ಮಾರಾಟಕ್ಕೆ ಇ-ಕಾಮರ್ಸ್ ವೇದಿಕೆ ಕಲ್ಪಿಸಲಾಗುವುದು ಎಂದು ಹೇಳಿದರು.
ಕೈಮಗ್ಗ ನೇಕಾರರು ಆಸಕ್ತಿ ತೋರಿದರೆ ವಿದ್ಯುತ್ ಮಗ್ಗ ಖರೀದಿಗೆ ಹಾಗೂ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿಗೆ ಸಹಾಯಧನ ಒದಗಿಸಲಾಗುವುದು. ಒಂದರಿಂದ ಹತ್ತು ಅಶ್ವಶಕ್ತಿವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಕೈಮಗ್ಗ ಅಭಿವೃದ್ಧಿ ನಿಗಮ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರೂ ನಿವೃತ್ತ ನೇಕಾರರಿಗೆ ಹಂತ ಹಂತವಾಗಿ ಗ್ರ್ಯಾಚುಟಿ, ಗಳಿಕೆ ರಜೆ ನಗದೀಕರಣ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಉದ್ದೇಶಕ್ಕೆ ೧೫.೮೯ ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.


