ಬೆಳಗಾವಿ,27: ಬೆಳಗಾವಿ ಮಹಾನಗರವನ್ನು ನಿಜ ಅರ್ಥದಲ್ಲಿ ಸ್ಮಾಟ್ ಸಿಟಿಯನ್ನಾಗಿ ಮಾಡುವ ಗುರಿಯೊಂದಿಗೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಿರುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ನಗರದ ವಿವಿಧೆಡೆ ಶುಕ್ರವಾರ ಸಂಜೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕ್ಷೇತ್ರದಲ್ಲಿ ಜನತೆ ಬಿಜೆಪಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರ ಕೊಟ್ಟಿದ್ದಾರೆ; ಆದರೆ, ಇನ್ನೂ ಅಭಿವೃದ್ಧಿಯಾಗಿಲ್ಲ. ಬಿಜೆಪಿಯವರು ಅಭಿವೃದ್ಧಿ ಮುಂದಿಟ್ಟುಕೊಂಡು ಜನರ ಮನೆ ಬಾಗಿಲಿಗೆ ಬರುತ್ತಿಲ್ಲ; ನನ್ನ ನೋಡಿ ಓಟು ಕೊಡಬೇಡಿ; ಪ್ರಧಾನಿ ಮೋದಿಯವರನ್ನು ನೋಡಿ ಓಟು ಕೊಡಿ ಎಂದು ಕೇಳುತ್ತಿದ್ದಾರೆ; ಇದು ಕ್ಷೇತ್ರದ ಜನರಿಗೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದರು.
ನಮ್ಮ ತಾಯಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿಯವರೊಂದು ಸ್ಲೋಗನ್ ಹೇಳುತ್ತಿದ್ದರು. ಆದೇನೆಂದರೆ, ಮೋದಿ ಜರೂರ್ ಹೈ ಎಂಪಿ ಮಜುಬೂರ್ ಹೈ ಎಂದು. ಆದರೆ, ನಾವಿಂದು ಹೇಳುವುದೇನೆಂದರೆ, ನಮಗೆ ಮಜಬೂರ್ ಎಂಪಿ ಬೇಡ; ಮಜಬೂತ್ ಎಂಪಿ ಬೇಕು; ಮಜಬೂತ್ ಎಂಪಿ ಇದ್ದರೇನೇ, ಅಭಿವೃದ್ಧಿ ಆಗೋದು; ನಮ್ಮೆಲ್ಲ ಯುವಕರಿಗೆ ನೌಕರಿ ಸಿಗೋದು ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದರು.
ನಮ್ಮ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯೆಂದು ಕರೆಸಿಕೊಳ್ಳುವುದಕ್ಕೆ ನಮಗೆಲ್ಲ ಹೆಮ್ಮೆ ಆಗುತ್ತದೆ. ಇಂದು ದೊಡ್ಡ ದೊಡ್ಡ ಫ್ಯಾಕ್ಟರಿಗಳೆಲ್ಲ ಹುಬ್ಬಳ್ಳಿ -ಧಾರವಾಡಕ್ಕೆಗೆ ಹೋಗಿವೆ; ಹೈಕೋರ್ಟ್, ಐಐಟಿ ಕಾಲೇಜು; ನಮ್ಮ ಯುವಕರಿಗೆ ನೌಕರಿ ಮಾಡುವ ಸವಲತ್ತುಗಳೆಲ್ಲ ಹುಬ್ಬಳ್ಳಿಗೆ ಹೋಗಿವೆ; ಇವೆನ್ನೆಲ್ಲ ಯಾರು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದನ್ನು ನೀವೇ ಯೋಚನೆ ಮಾಡಿ ಎಂದ ಮೃಣಾಲ ಹೆಬ್ಬಾಳ್ಕರ್, ದುರಾದೃಷ್ಟಕರ ಸಂಗತಿ ಏನೆಂದರೆ ನಮ್ಮ ವಿರುದ್ಧ ಸ್ಪರ್ಧಿ ಮಾಡಿರುವ ಪಕ್ಷದ ಅಭ್ಯರ್ಥಿ ಕೂಡ ಹುಬ್ಬಳ್ಳಿಯವರು; ಏನಾದರೂ ನಿಮ್ಮ ಕೆಲಸ ಕಾರ್ಯಗಳು , ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದರೆ ಹುಬ್ಬಳ್ಳಿಗೆ ಹೋಗಬೇಕಾಗುತ್ತೆ; ಹಾಗಾಗಿ ಈ ಬಗ್ಗೆ ನೀವೇ ಯೋಚನೆ ಮಾಡಿ ಮತ ಚಲಾಯಿಸಿ ಎಂದರು.