ಬೆಂಗಳೂರು: ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಗುರುವಾರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದರು.
ಸೀನ್ ಆಫ್ ಕ್ರೈಂ ಆಫೀಸರ್ (ಎಸ್‌ಒಸಿಒ) ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವು ಅಂಜಾಂದ್ರಿ ಲೇಔಟ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಲಾದ ಮಣ್ಣು, ಮರಳು, ಇಟ್ಟಿಗೆಗಳು, ಸಿಮೆಂಟ್ ಮತ್ತು ಸ್ಟೀಲ್ ರಾಡ್, ರಕ್ತದ ಮಾದರಿಗಳು ಮತ್ತು ಲಭ್ಯವಿರುವ ಇತರ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿದೆ.
ಮಂಗಳವಾರ ಕಟ್ಟಡ ಕುಸಿತಗೊಂಡು 8 ಮಂದಿ ಕಾರ್ಮಿಕರು ಮೃತಪಟ್ಟಿದ್ದರು. ಕಟ್ಟಡದ ಅವಶೇಷಗಳಡಿ ಇನ್ನು ಓರ್ವ ಕಾರ್ಮಿಕ ಸಿಲುಕಿಕೊಂಡಿದ್ದಾರೆಂದು ಹೇಳಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.