ಹುಕ್ಕೇರಿ02 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ವಿಶ್ವದ ಸರ್ವಶ್ರೇಷ್ಠ ಭಾರತದ ಸಂವಿಧಾನ ಬದಲಾಯಿಸುವ ಏಕೈಕ ಹಿಡನ್ ಅಜೆಂಡಾ ಹೊಂದಿದೆ. ಈ ಮೂಲಕ ದೇಶದಲ್ಲಿ ಮನುಸ್ಮೃತಿ ಹೇರುವ ಹುನ್ನಾರ ನಡೆಸಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀಧರ ಕಲಿವೀರ ಆರೋಪಿಸಿದರು.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ರಕ್ಷಿ ಕ್ರಾಸ್ ಬಳಿ ಖಾಸಗಿ ಹೊಟೇಲ್ನಲ್ಲಿ ಬುಧವಾರ ನಡೆದ ವಿವಿಧ ದಲಿತಪರ ಸಂಘಟನೆಗಳ ಸಭೆ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳಿಗೆ ತಿಲಾಂಜಲಿ ನೀಡಿದ್ದರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ 10 ವರ್ಷದ ಮೋದಿ ಸರ್ಕಾರದ ಅವಧಿಯಲ್ಲಿ ದಲಿತರ ಮೇಲೆ ಅತ್ಯಾಚಾರ, ಅನ್ಯಾಯ, ಕೊಲೆ, ಸುಲಿಗೆ ಹೆಚ್ಚಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರವು ಪ್ರಜಾತಂತ್ರ ವಿರೋಧಿ ನಿಲುವು ತಳೆದು ಜಾತಿವಾದ, ಕೋಮುವಾದ ಬೆಳೆಸುತ್ತಿವೆ. ಇದರೊಂದಿಗೆ ದೇಶದ್ರೋಹಿ ಗೋಡ್ಸೆ, ಸಾವರಕರ್ ವಿಚಾರಗಳನ್ನು ಮುನ್ನಲೆಗೆ ತರುವ ಸಂಚು ರೂಪಿಸಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಮಾಜಿ ಸದಸ್ಯ ಸುರೇಶ ತಳವಾರ, ಹಾಸನದ ಎಂ.ಗೋವಿAದರಾಜ, ಶಿವಮೊಗ್ಗದ ಎಂ.ಗುರುಮೂರ್ತಿ, ಭೀಮ್ ಆರ್ಮಿಯ ರಾಜ್ಯಾಧ್ಯಕ್ಷ ಡಿ.ಎಸ್.ರಾಜಗೋಪಾಲ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ನಿರುದ್ಯೋಗ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲು ನೀಡಲು ನಿರ್ಧರಿಸಲಾಗಿದ್ದು ಚಿಕ್ಕೋಡಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಪ್ರಿಯಂಕಾ ಜಾರಕಿಹೊಳಿ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಎ.ಗೋಪಾಲ, ಮಲ್ಲೇಶ ಚೌಗಲೆ, ಸಿದ್ದಪ್ಪ ಕಾಂಬಳೆ, ಅಪ್ಪಾಸಾಹೇಬ ನಾಯಕ, ಶ್ರೀಕಾಂತ ತಳವಾರ, ದುರ್ಗೇಶ ಮೇತ್ರಿ, ಮಹಾದೇವ ತಳವಾರ, ಬಿ.ಕೆ.ಸದಾಶಿವ, ಅಪ್ಪಣ್ಣಾ ಖಾತೇದಾರ, ಕುಮಾರ ತಳವಾರ, ದೀಪಕ ವೀರಮುಖ, ಶಂಕರ ತಿಪ್ಪನಾಯಿಕ, ರೋಹಿತ ತಳವಾರ, ಕುಮಾರ ಗಸ್ತಿ, ಕಾಶಪ್ಪಾ ಹರಿಜನ ಮತ್ತಿತರರು ಉಪಸ್ಥಿತರಿದ್ದರು.
ಮುಖಂಡ ಸುರೇಶ ತಳವಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವು ಕಣಗಲಿ ನಿರೂಪಿಸಿದರು. ಮುತ್ತು ಕಾಂಬಳೆ ವಂದಿಸಿದರು. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಆಯೋಜಿಸಿದ ಈ ಮಹತ್ವದ ಸಭೆಯಲ್ಲಿ ಎಸ್ಸಿಎಸ್ಟಿ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಮೇಲ್ವರ್ಗದ ಬಡವರನ್ನು ಕಾಂಗ್ರೆಸ್ನತ್ತ ಆಕರ್ಷಿಸಿ ಮತಸೆಳೆಯಲು ನಿರ್ಧರಿಸಲಾಯಿತು. ಚಿಕ್ಕೋಡಿ ಕ್ಷೇತ್ರದಲ್ಲಿ ದಲಿತ ಮತಗಳನ್ನು ವಿಭಜಿಸಲು ಬಿಜೆಪಿ ಹುನ್ನಾರ ನಡೆಸಿ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರಗೆ ಕುಮ್ಮಕ್ಕು ನೀಡುತ್ತಿದೆ. ಬಿಜೆಪಿಯ ಬಿ ಟೀಮ್ನಂತಿರುವ ಕಲ್ಲೋಳಕರ ಅವರನ್ನು ಸಮಾಜ ತಿರಸ್ಕರಿಸಬೇಕು ಎಂದು ಮುಖಂಡರು ಕರೆ ನೀಡಿದರು.