ಕೊಪ್ಪಳ, ನವೆಂಬರ್ 06: ತುಂಗಭದ್ರಾ ಜಲಾಶಯ , ರಾಜ್ಯದ ಹಳೆಯ ಜಲಾಶಯಗಳಲ್ಲೊಂದು. ಈ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹದೊಂದು ಘಟನೆ ನಡೆದಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಯಾವುದೇ ಜಲಾಶಯದ ಗೇಟ್ಗಳನ್ನು ಐವತ್ತು ವರ್ಷದ ನಂತರ ಬದಲಾವಣೆ ಮಾಡಬೇಕು. ಆದರೆ ತುಂಗಭದ್ರಾ ಜಲಾಶಯದ ಗೇಟ್ ಬದಲಾವಣೆ ಮಾಡಿಲ್ಲ. ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವ ಹಾಗೆ ಟಿಬಿ ಡ್ಯಾಂ ಬೋರ್ಡ್, ಹೊಸ ಗೇಟ್ ಅಳವಡಿಕೆಗೆ ಪರಿಶೀಲನೆ ಆರಂಭಿಸಿದೆ.
ಗೇಟ್ ಕೊಚ್ಚಿಕೊಂಡು ಹೋಗಲು ತುಂಗಭದ್ರಾ ಡ್ಯಾಂ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯ್ತಾ ಎಂಬ ಪ್ರಶ್ನೆ ಉದ್ಬವಿಸಿತ್ತು. ಇದಕ್ಕೆ ಕಾರಣ, ಯಾವುದೇ ಜಲಾಶಯದ ಕ್ರಸ್ಟಗೇಟ್ ಗಳು, ಚೈನ್ ಲಿಂಕ್ಗಳನ್ನು ಬದಲಾಯಿಸದೇ ಇರುವುದು. ತುಂಗಭದ್ರಾ ಜಲಾಶಯಕ್ಕೆ ಎಪ್ಪತ್ತು ವರ್ಷಗಳ ಹಿಂದೆ ಕ್ರಸ್ಟಗೇಟ್, ಚೈನ್ ಲಿಂಕ್ಗಳನ್ನು ಅಳವಡಿಸಿದ್ದು, ಇಲ್ಲಿಯವರಗೆ ಒಮ್ಮೆಯೂ ಬದಲಾಯಿಸಿಲ್ಲ. ಬದಲಾವಣೆ ಮಾಡಬೇಕು ಅನ್ನೋ ತಜ್ಞರ ಸೂಚನೆಯನ್ನು ಕೂಡಾ ಡ್ಯಾಂ ನಿರ್ವಹಣೆ ಮಾಡುವ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಕ್ಕೆ ಇಂತಹದೊಂದು ಘಟನೆ ನಡೆಯಿತು ಅಂತ ತಜ್ಞರು ಹೇಳಿದ್ದರು.