ಮೈಸೂರು, ಜು.12: ಮೈಸೂರಿ(Mysore)ನ ಮುಡಾ ಕಚೇರಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಇಂದು(ಶುಕ್ರವಾರ) ವಿಪಕ್ಷ ಬಿಜೆಪಿ ಮುಡಾ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಬಿಜೆಪಿ ಪ್ರತಿಭಟನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಪ್ರತಿಭಟನೆ ನಡೆಸಿದ್ದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲಿಲ್ಲ. ಈ ಹಿನ್ನಲೆ ನಮ್ಮನ್ನೂ ಬಂಧಿಸಿ ಎಂದು ಕೈ ಕಾರ್ಯಕರ್ತರು ಹೈಡ್ರಾಮ ಮಾಡಿದ್ದಾರೆ.
ಬಿಜೆಪಿ ಪ್ರತಿಭಟನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರೂ ಪ್ರತಿಭಟನೆ
‘ಬಿಜೆಪಿ ಕಾರ್ಯಕರ್ತರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುತ್ತಿಗೆ ಹಾಕಲು ಬಿಡದಿದ್ದಾಗ ತಮ್ಮನ್ನೂ ಅರೆಸ್ಟ್ ಮಾಡುವಂತೆ ಪಟ್ಟು ಹಿಡಿದಿದ್ದರು. ಇದೇ ವೇಳೆ ಮೈಸೂರು ಕಮಿಷನರೇಟ್ ಪೊಲೀಸರ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕಿ, ನಮ್ಮನ್ನೂ ಬಂಧಿಸಿ, ನಮ್ಮನ್ನು ಅರೆಸ್ಟ್ ಮಾಡದೆ ನೀವು ಅವಮಾನ ಮಾಡಿದ್ದೀರಿ, ನಿಮ್ಮ ಕಮಿಷನರ್ ಎಲ್ಲಿ ಎಂದು ಡಿಸಿಪಿ ಜಾಹ್ನವಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆವಾಜ್ ಹಾಕಿದ್ದಾರೆ. ಆದರೂ ಪೊಲೀಸರು ಬಂಧಿಸಲು ಮುಂದಾಗಿಲ್ಲ.
ಇನ್ನು ಎಲ್ಲಾ ಹೈಡ್ರಾಮಾ ಬಳಿಕ ಪ್ರತಿಭಟನೆ ಕೈಬಿಡುವಂತೆ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ ಸೂಚನೆ ನೀಡಿದರು. ಅವರ ಸೂಚನೆ ಮೇರೆಗೆ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಕೈಬಿಟ್ಟು ಮುಡಾ ಕಚೇರಿಯಿಂದ ತೆರಳಿದ್ದಾರೆ.