ಬೆಂಗಳೂರು: ಮಳೆಗಾಲದ ಅಧಿವೇಶನ ಮುಗಿಯಲು 2 ದಿನ ಬಾಕಿ ಇರುವಂತೆ ರಾಜ್ಯ ಸರ್ಕಾರ ಪ್ರಮುಖ ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿರುವ ಹಿನ್ನೆಲೆಯಲ್ಲಿ ಜು.25 ಮತ್ತು 26 ರಂದು ಪರಿಷತ್ತಿನ ಕಾಂಗ್ರೆಸ್ ಪಕ್ಷದ ಎಲ್ಲಾ ಸದರ್ಯರು ಕಡ್ಡಾಯವಾಗಿ ಹಾಜರಿರುವಂತೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ವಿಪ್ ನೀಡಿದ್ದಾರೆ.
ಇನ್ನೆರಡು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಸರ್ಕಾರ ಸುಮಾರು 10 ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿರುವುದರಿಂದ ಸದಸ್ಯರ ಹಾಜರಾತಿ ಕಡ್ಡಾಯಗೊಳಿಸಿ ವಿಪ್ ನೀಡಲಾಗಿದೆ.
ಗುರುವಾರದ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ನೇ ಸಾಲಿನ ಕರ್ನಾಟಕ ಧನವಿಯೋಗ (ಸಂಖ್ಯೆ-4) ವಿಧೇಯಕ, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ (2ನೇ ತಿದ್ದುಪಡಿ) ವಿಧೇಯಕ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ ಮಂಡಿಸಲಿದ್ದಾರೆ. ಈ 3 ವಿಧೇಯಕಗಳಿಗೆ ಈಗಾಗಲೇ ಕೆಳಮನೆ ಅಂಗೀಕಾರ ನೀಡಿದೆ. ಇದರ ಜೊತೆಗೆ ಸಿಎಂ ಇನ್ನೂ ಎರಡು ಮಹತ್ವದ ನಿರ್ಣಯ ಮಂಡಿಸಲಿದ್ದಾರೆ.